ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಲಿಂಗಾಯತ ಕರ್ನಾಟಕದಲ್ಲಿ ಹುಟ್ಟಿದ ಧರ್ಮ. ಇದು ಸ್ವತಂತ್ರ ಧರ್ಮವಾಗಿದ್ದು, ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಮಾನ್ಯತೆ ನೀಡದಿರುವುದು ವಿಷಾಧದ ಸಂಗತಿ ಎಂದು ಅಖಿಲ ಕರ್ನಾಟಕ ಲಿಂಗಾಯತ ಒಳಪಂಗಡಗಳ ಏಕತಾ ಸಮಿತಿಯ ರಾಜ್ಯಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೊಂಗವಾಡ ಹೇಳಿದರು.ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಬಸವಕೇಂದ್ರದಲ್ಲಿ ಭಾನುವಾರ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸಂಯೋಜಿಸಿದ ವಚನಶಾಸ್ತ್ರಸಾರ ಶತಮಾನೋತ್ಸವ ಅಂಗವಾಗಿ ಆಯೋಜಿಸಿರುವ ತಿಂಗಳ ಪರ್ಯಂತರ ನಡೆಯುವ ಷಟ್‌ಸ್ಥಲ ವಚನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅತ್ಯಂತ ಶ್ರೇಷ್ಟ ಧರ್ಮ ಲಿಂಗಾಯತ. ಧರ್ಮದ ಎಲ್ಲ ಅರ್ಹತೆಗಳು ಇದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡದಿರುವುದು ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸದಿರುವುದು ಖಂಡನಾರ್ಹ. ಆದಷ್ಟೂ ಶೀಘ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.ಬಸವಣ್ಣನವರು ಎಲ್ಲರಿಗೂ ಸಮಾನತೆಯನ್ನು ಕೊಟ್ಟರು. ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿದರು. ಕಸಬು, ಉದ್ಯೋಗ, ವೃತ್ತಿ ಕಾಯಕದಿಂದ ಬಂದ ಹೆಸರುಗಳೇ ಹೊರತು ಜಾತಿಗಳಲ್ಲ. ಎಲ್ಲ ಲಿಂಗಾಯತ ಒಳಪಂಗಡಗಳನ್ನು ಮತ್ತೆ ಸೇರಿಸುವ ಕೆಲಸ ಆಗಬೇಕು. ಲಿಂಗಾಯತರು ವಚನ ಸಾಹಿತ್ಯವನ್ನು ಓದಬೇಕು ಹಾಗೂ ವಚನಗಳಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶರಣ ಸಾಹಿತಿ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವೀರಣ್ಣ ರಾಜೂರ ಮಾತನಾಡಿ, ಲಿಂಗಾಯತರು ಕಂದಾಚಾರ, ಮೂಢಾಚರಣೆಗಳನ್ನು ಬಿಡಬೇಕು. ಲಿಂಗಾಯತ ಮಠದ ಶ್ರೀಗಳು ಧರ್ಮದ ತತ್ವಗಳನ್ನು ಬೋಧನೆ ಮಾಡುತ್ತಿಲ್ಲ. ಬಸವ ಕೇಂದ್ರ, ಸಮಿತಿಯವರು ಧರ್ಮದ ತತ್ವಗಳನ್ನು ತಿಳಿಸಿಕೊಡುತ್ತಿವೆ. ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ವಚನಗಳ ಸಂರಕ್ಷಣೆ ಮಾಡದಿದ್ದರೆ ನಮಗೆ ಇಂದು ಒಂದು ವಚನ ಸಹ ಸಿಗುತ್ತಿರಲಿಲ್ಲ ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಸವೇಶ್ವರರು ಕೊಟ್ಟ ಕಾಯಕ, ದಾಸೋಹ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ಇಂತಹ ಪ್ರವಚನ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಹ ವಾತಾವರಣ ನಿರ್ಮಾಣ ಆಗಬೇಕು. ಬಸವಕೇಂದ್ರಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇನೆ ಎಂದರು.
ತಿಂಗಳ ಪರ್ಯಂತರ ಪ್ರವಚನ ನೀಡಲಿರುವ, ಶ್ರೀಗುರು ಬಸವಮಂಟಪದ ಅನುಭಾವಿ ಶಶಿಧರ ಕರವೀರಶೆಟ್ಟರ, ಬಸವಕೇಂದ್ರದ ಮಾರ್ಗದರ್ಶಕ ಸಮಿತಿ ಅಧ್ಯಕ್ಷ ನೀಲಕಂಠ ಅಸೂಟಿ ಮಾತನಾಡಿದರು. ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಬಿ.ಎಲ್. ಲಿಂಗಶೆಟ್ಟರ, ಎಸ್.ವಿ. ಕೊಟಗಿ, ಎಂ.ವಿ. ಗೊಂಗಡಶೆಟ್ಟಿ, ಪ್ರಭು ಅಂಗಡಿ, ಎಂ.ಬಿ. ಕಟ್ಟಿ, ಶಿವಯೋಗಿ ಮುರ್ಖಂಡೆ, ಉಮಾ ಹುಲಿಕಂತಿಮಠ, ಶಶಿಕಲಾ ಕೊಡಕಲ್, ಡಾ. ಸ್ನೇಹಾ ಭೂಸನೂರ, ಸುನಿಲ ಬ್ಯಾಹಟ್ಟಿ, ಡಿ.ಆರ್. ಕುಂಬಾರ, ಶಿವನಗೌಡ ಪಾಟೀಲ, ಎನ್.ಬಿ. ಬೆಳ್ಳಿಗಟ್ಟಿ, ಪ್ರೇಮಕ್ಕ ಅಂಗಡಿ, ಬಸವಂತಪ್ಪ ತೋಟದ ಸೇರಿದಂತೆ ಹಲವರಿದ್ದರು. ಸಾಹಿತಿ ಎಸ್.ವಿ. ಪಟ್ಟಣಶೆಟ್ಟಿ ಸ್ವಾಗತಿಸಿದರು. ಡಾ. ಸುರೇಶ ಹೊರಕೇರಿ ನಿರೂಪಿಸಿದರು. ಡಾ. ಪ್ರಕಾಶ ಮುನ್ನೋಳಿ ವಂದಿಸಿದರು.