ಲೋಕಾಯುಕ್ತ ಕಾರ್ಯದ ಬಗ್ಗೆ ಮಾಹಿತಿ ನೀಡಿ

| Published : Nov 29 2024, 01:02 AM IST

ಸಾರಾಂಶ

ಜನರಿಗೆ ಮಾಧ್ಯಮಗಳಿಂದ ಮಾಹಿತಿ ದೊರೆತರೆ, ನಾಲ್ಕಾರು ಮಂದಿ ತಮ್ಮ ಬಳಿ ನೋವನ್ನು ಹೇಳಿಕೊಳ್ಳುತ್ತಾರೆ. ಅವರಲ್ಲಿ ಒಬ್ಬರಿಗಾದರೂ ನ್ಯಾಯ ಸಿಕ್ಕರೆ ಲೋಕಾಯುಕ್ತ ಇರುವುದಕ್ಕೂ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಇಲಾಖೆಯ ಸಭೆ, ಕಾರ್ಯ ಚಟುವಟಿಕೆಗಳ ಕುರಿತು ಮಾಧ್ಯಮಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಅನುಸರಿಸಬೇಕಾಗುತ್ತದೆ ಎಂದು ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪ ಎಲ್. ಕುಸಲಾಪುರ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಜನರಿಗೆ ಮಾಧ್ಯಮಗಳಿಂದ ಮಾಹಿತಿ ದೊರೆತರೆ, ನಾಲ್ಕಾರು ಮಂದಿ ತಮ್ಮ ಬಳಿ ನೋವನ್ನು ಹೇಳಿಕೊಳ್ಳುತ್ತಾರೆ. ಅವರಲ್ಲಿ ಒಬ್ಬರಿಗಾದರೂ ನ್ಯಾಯ ಸಿಕ್ಕರೆ ಲೋಕಾಯುಕ್ತ ಇರುವುದಕ್ಕೂ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಇಲಾಖೆಯ ಸಭೆ, ಕಾರ್ಯ ಚಟುವಟಿಕೆಗಳ ಕುರಿತು ಮಾಧ್ಯಮಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಅನುಸರಿಸಬೇಕಾಗುತ್ತದೆ ಎಂದು ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪ ಎಲ್. ಕುಸಲಾಪುರ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಅರ್ಜಿ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿ, ನಾವು ಕಾಟಾಚಾರಕ್ಕೆ ಸಭೆ ನಡೆಸಲು ಬರಲ್ಲ ಅಥವಾ ಅಧಿಕಾರಿಗಳ ಹೊಟ್ಟೆ ಮೇಲೆ ಹೊಡೆಯಲು ಬರಲ್ಲ. ದಬ್ಬಾಳಿಕೆ, ಅನ್ಯಾಯಕ್ಕೆ ಒಳಗಾದವರ ಸಂಕಷ್ಟಗಳಿಗೆ ಸ್ಪಂದಿಸಲು ಬರುತ್ತೇವೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಇಲಾಖೆಯ ಸಭೆ, ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಬೇಕು ಎಂದರು.

ಸಾರ್ವಜನಿಕರಿಗೆ ಸರಿಯಾದ ವೇಳೆಗೆ ಅವರ ಕೆಲಸ ಮಾಡಿಕೊಟ್ಟರೆ ಅದೇ ಪುಣ್ಯದ ಕೆಲಸ. ಅಲೆದಾಡಿಸುವುದು ಬಿಡಬೇಕು. ಇದನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಿಳಿದುಕೊಳ್ಳಿ. ತಾಲೂಕು ಕಚೇರಿ, ನಗರಸಭೆ, ನಾಲ್ಕಾರು ಪಿಡಿಓಗಳ ವಿರುದ್ದ ಬಹಳ ದೂರುಗಳು ಕೇಳಿ ಬಂದಿದೆ. ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಭೆ ಆರಂಭದಲ್ಲಿ ಅರ್ಜಿದಾರ ಪುಟ್ಟಸ್ವಾಮಿ, ಜೇಡಿಕಟ್ಟೆ ಸರ್ವೇ ನಂ. 65ರ ಜಮೀನು ಪೋಡು ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ನೀಡಿ 4 ವರ್ಷಗಳಾದರೂ ಅಲೆದಾಡಿಸುತ್ತಿದ್ದಾರೆ. ಕಚೇರಿಗೆ ಹೋದರೆ ಸರಿಯಾಗಿ ಮಾಹಿತಿ ನೀಡದೆ ಸತಾವಣೆ ಮಾಡುತ್ತಾರೆಂದು ಆರೋಪಿಸಿದರು. ಆಗ ನಿರೀಕ್ಷಕ ವೀರಬಸಪ್ಪ ನಾವು ಒಂದು ತಿಂಗಳಲ್ಲಿ ಎಡಿಎಲ್‌ಆರ್ ಅವರಿಂದ ವರದಿ ತರಿಸಿಕೊಂಡಿದ್ದೇವೆ ಎಂದರು. ಆಗ ಸರ್ವೇಯರ್ ಯತೀಶ್ ಮಾಹಿತಿ ನೀಡಿದರು.

ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ, ಜನ್ನಾಪುರ ಅಂತರಘಟ್ಟಮ್ಮ ದೇವಾಲಯದ ಬಳಿ ನಗರಸಭೆಯು ಅಕ್ರಮ ಖಾತೆ ದಾಖಲು ಮಾಡಿದೆ ಎಂದು ಫಿಲ್ಟರ್ ಶೆಡ್ ನಾಗರೀಕ ಹಿತ ರಕ್ಷಣಾ ಸಮಿತಿವತಿಯಿಂದ ದೂರು ಸಲ್ಲಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಡಿಬಿ ಹಳ್ಳಿ ಯಡೇಹಳ್ಳಿ ಸರ್ವೇ ನಂ. 66ರಲ್ಲಿ 34 ಜನರಿಗೆ ಸರ್ಕಾರ ತಲಾ 2 ಎಕರೆ ಭೂಮಿ ಮಂಜೂರು ಮಾಡಿದ್ದರೂ ಸಹ ಅರಣ್ಯ ಇಲಾಖೆ ಸಾಗುವಳಿ ಮಾಡಲು ಬಿಡುತ್ತಿಲ್ಲ. ಪಿಟಿಸಿಎಲ್ ಭೂಮಿಯನ್ನು ಬಿಡಿಸಿಕೊಟ್ಟ ಮೇಲೆ ಮತ್ತೆ ಉಪ ವಿಭಾಗಾಧಿಕಾರಿಗಳು ವಿರೋಧಿಗಳಿಗೆ ರಕ್ಷಣೆ ನೀಡುತ್ತಾ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ದೂರು ನೀಡಿದರು.ಜನ್ನಾಪುರದ ಫಿಲ್ಟರ್‌ಶೆಡ್ ನ್ಯಾಯಬೆಲೆ ಅಂಗಡಿ ಮೇಲೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಎಂಬುವರು ಆಗಾಗ್ಗೆ ಸುಳ್ಳು ಕೇಸು ಹಾಕಿಸುತ್ತಿದ್ದಾರೆಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಆರ್ ಶಿವರಾಮ್ ದೂರು ಸಲ್ಲಿಸಿದರು.ಜೇಡಿಕಟ್ಟೆ ಸರ್ವೇ ನಂ. 71ರಲ್ಲಿ 3.39 ಎಕರೆ ಬೀಳು ಬಿದ್ದಿದ್ದ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿ. ತೀರ್ಥೇಶ್ ದೂರು ನೀಡಿದರೆ, ದಾನವಾಡಿ ಗ್ರಾಮದಲ್ಲಿ 1.32 ಎಕರೆ ಜಮೀನು ಇದ್ದು, ಗಂಗಾ ಕಲ್ಯಾಣ ಯೋಜನೆ ಮಂಜೂರಾಗಿದ್ದರೂ ಸಹ ಇನ್ನೂ ಹಣ ನೀಡಿಲ್ಲವೆಂದು ಶಿವಮ್ಮ ಎಂಬುವರು ದೂರು ನೀಡಿದರು.

ಉಪ ತಹಸೀಲ್ದಾರ್ ಉಮೇಶ್, ತಾ.ಪಂ. ಸಹಾಯಕ ನಿರ್ದೇಶಕ ಉಪೇಂದ್ರ ಬಾಬು ಉಪಸ್ಥಿತರಿದ್ದರು. ಸಭೆಯಲ್ಲಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಟೀಕಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.