ಪ್ರವಾಸಿ ತಾಣಗಳ ಗತವೈಭವ ಕುರಿತು ಮಾಹಿತಿ ನೀಡಿ

| Published : Jul 06 2024, 12:45 AM IST / Updated: Jul 06 2024, 12:46 AM IST

ಸಾರಾಂಶ

ಪ್ರಸ್ತುತ ಪ್ರವಾಸೋದ್ಯಮವು ಹೆಚ್ಚು ಪ್ರಖ್ಯಾತಿ ಪಡೆದಿರುವದರಿಂದ ಪ್ರವಾಸಿ ಗೈಡ್‌ಗಳು ಈ ಕಾಲದಲ್ಲಿ ನವೀನ ತಂತ್ರಜ್ಞಾನಗಳ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಬೇಕು

ಗದಗ: ಪ್ರವಾಸಿ ಗೈಡ್‌ಗಳು ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೌಹಾರ್ದಿತವಾಗಿ ಪ್ರವಾಸಿ ತಾಣಗಳ ಗತವೈಭವ ಕುರಿತು ಮಾಹಿತಿ ನೀಡಬೇಕು.ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಪರಿಚಯಿಸಿ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಬಗ್ಗೆ ಗೌರವ ಮತ್ತು ಹೆಮ್ಮೆ ಉಂಟು ಮಾಡಬೇಕೆಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮಪ್ರಸಾದ ಮನೋಹರ ಹೇಳಿದರು.

ಅವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 7 ದಿನಗಳ ಪ್ರವಾಸಿ ಗೈಡ್‌ಗಳಿಗೆ ನಡೆದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿ ಗೈಡ್‌ಗಳಿಗೆ ಇಂತಹ ತರಬೇತಿ ಕಾರ್ಯಕ್ರಮಗಳು ಅತಿ ಅವಶ್ಯಕವಾಗಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಈ ತರಹದ ತರಬೇತಿ ಕಾರ್ಯಕ್ರಮ ಆಯೋಜಿಸಿದಕ್ಕೆ ವಿಶ್ವವಿದ್ಯಾಲಯಕ್ಕೆ ಧನ್ಯವಾದ ತಿಳಿಸಿದರು.

ಪ್ರಸ್ತುತ ಪ್ರವಾಸೋದ್ಯಮವು ಹೆಚ್ಚು ಪ್ರಖ್ಯಾತಿ ಪಡೆದಿರುವದರಿಂದ ಪ್ರವಾಸಿ ಗೈಡ್‌ಗಳು ಈ ಕಾಲದಲ್ಲಿ ನವೀನ ತಂತ್ರಜ್ಞಾನಗಳ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದ ಅವರು, ಪ್ರವಾಸಿ ಗೈಡ್‌ಗಳ ಹಲವಾರು ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೋ. ಡಾ. ಸುರೇಶ ನಾಡಗೌಡರ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸೂಕ್ತ ಸಲಹೆ ನೀಡಿದಕ್ಕೆ ಧನ್ಯವಾದ ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಪ್ರವಾಸಿ ಗೈಡ್‌ಗಳಿಗೆ ವಿಶ್ವವಿದ್ಯಾಲಯದಿಂದ ಸರ್ಟಿಫಿಕೇಟ್, ಡಿಪ್ಲೋಮಾ ಕೋರ್ಸಗಳನ್ನು ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದೆಂದು ಹೇಳಿದರು.

ಈ ವೇಳೆ ವಿಶ್ವವಿದ್ಯಾಲಯದ ತರಬೇತಿ ವಿಭಾಗದ ಸಹಾಯಕ ನಿರ್ದೇಶಕ ಡಾ.ಅಬ್ದುಲ್ ಅಜೀಜ್ ಮುಲ್ಲಾ, ಜಿಲ್ಲಾ ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ್ವರ ವಿಭೂತಿ ಹಾಗೂ ಇತರರು ಇದ್ದರು.