ಬಳಿಕ ಮಾತನಾಡಿದ ಬೇಲೂರು ಸೋಮಶೇಖರ್, ಅಂಬರೀಷ್ ಅವರನ್ನು ಕಳೆದುಕೊಂಡು ಎಂಟು ವರ್ಷಗಳಾಗಿದೆ. ಇನ್ನೂ ಅವರು ಅಭಿಮಾನಿಗಳು ಹಾಗೂ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಕರ್ತವ್ಯ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಟ, ಮಾಜಿ ಸಚಿವ ಅಂಬರೀಷ್ ಪುತ್ಥಳಿ ನಿರ್ಮಾಣಕ್ಕೆ ಜಾಗ ದೊರಕಿಸಿಕೊಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಹಾಗೂ ಅಖಿಲ ಕರ್ನಾಟಕ ನ್ಯಾಯ, ನೀತಿ, ಧರ್ಮ ಅಂಬರೀಷ್ ಸೇನಾ ಸಮಿತಿ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.ಬಳಿಕ ಮಾತನಾಡಿದ ಬೇಲೂರು ಸೋಮಶೇಖರ್, ಅಂಬರೀಷ್ ಅವರನ್ನು ಕಳೆದುಕೊಂಡು ಎಂಟು ವರ್ಷಗಳಾಗಿದೆ. ಇನ್ನೂ ಅವರು ಅಭಿಮಾನಿಗಳು ಹಾಗೂ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಕರ್ತವ್ಯ ಎಂದು ಹೇಳಿದರು.
ರಾಜಕೀಯದಲ್ಲಿಯೂ ಪಕ್ಷಾತೀತವಾಗಿ ಎಲ್ಲ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಕಾವೇರಿ ಕೊಳ್ಳದ ರೈತರ ಹಿತ ಕಾಪಾಡಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಬದ್ಧತೆಯನ್ನು ಮೆರೆದಿದ್ದರು. ಮಂಡ್ಯ ಜಿಲ್ಲೆಯಲ್ಲಿ ಸಮುದಾಯ ಭವನಗಳು, ಕಾಂಪೌಂಡ್‌ಗಳು ಹಾಗೂ ಪ್ರಮುಖ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಅಂಬರೀಷ್ ಅವರ ಕೊಡುಗೆ ಮಹತ್ವದ್ದಾಗಿದೆ. ಮಂಡ್ಯ ವೈದ್ಯಕೀಯ ಕಾಲೇಜು ಸೇರಿದಂತೆ ರಾಜ್ಯದ ಆರು ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ದೊರಕಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.ಬೇರೆ ಬೇರೆ ನಗರಗಳಲ್ಲಿ ಅಂಬರೀಷ್ ಅವರ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವರ ತವರು ಜಿಲ್ಲೆಯಾದ ಮಂಡ್ಯ ನಗರದಲ್ಲಿ ಪುತ್ಥಳಿ ಇಲ್ಲದಿರುವುದು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಹಿಂದಿನ ಅಧ್ಯಕ್ಷ ಎಚ್.ಎಸ್.ಮಂಜು ಅವರ ಅವಧಿಯಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದ ಸರ್ಕಾರಿ ನಿಯಮಗಳ ಕಾರಣದಿಂದ ಪ್ರಸ್ತಾವನೆ ಮುಂದುವರಿಯಲಿಲ್ಲ ಎಂದರು.
ಅನುದಾನ ಬೇಡ, ಸ್ಥಳಾವಕಾಶ ಕೊಡಿ:ಅಂಬರೀಷ್ ಅವರ ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳೇ ಹಣ ಸಂಗ್ರಹಿಸಿ ಸಂಪೂರ್ಣ ವೆಚ್ಚ ಭರಿಸಲು ಸಿದ್ಧರಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನವನ್ನು ಕೇಳುತ್ತಿಲ್ಲ. ಮಂಡ್ಯ ನಗರದಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ಅಭಿಮಾನಿಗಳೇ ಆಳೆತ್ತರದ ಪುತ್ಥಳಿಯನ್ನು ನಿರ್ಮಿಸುತ್ತೇವೆ ಎಂದು ಬೇಲೂರು ಸೋಮಶೇರ್ಖ ಮನವಿ ಮಾಡಿದರು.
ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರಮೇಶ್‌ಗೌಡ, ಹನಗನಹಳ್ಳಿ ರಾಜು, ಮಂಡ್ಯ ಶಿವರಾಜು, ಸಿದ್ದೇಗೌಡ, ರಾಜೇಶ್, ಶ್ರೀಧರ್, ಪುಟ್ಟಸ್ವಾಮಿ ಸೇರಿದಂತೆ ವಿವಿಧ ಅಂಬರೀಷ್ ಅಭಿಮಾನಿ ಸಂಘಟನೆಗಳ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.