ನಾನು ರಾಜಕೀಯಕ್ಕೆ 2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ ವಿಜಯ್ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ, ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಕಾರ ಬಹಳಷ್ಟಿದೆ, ಅದನ್ನ ನಾವು ಮರೆಯುವುದು ಮನುಷ್ಯತ್ವದ ಗುಣವಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎರಡು ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಅವರಿಗೆ ವಿಧಾನಪರಿಷತ್ ಸ್ಥಾನ ನೀಡಬೇಕೆಂದು ಒಮ್ಮತದ ನಿರ್ಣಯ ಮಾಡಲಾಯಿತು.ನಗರದ ಜೆ.ಪಿ. ಪಾರ್ಚೂನ್ ಹೊಟೇಲ್ ಸಭಾಂಣಗದಲ್ಲಿ ಶನಿವಾರ ಸಂಜೆ ನಡೆದ ಶಾಸಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ 2 ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಕೆಪಿಸಿಸಿಯ ಜಿಲ್ಲಾ ವ್ಯಾಪ್ತಿ ಪದಾಧಿಕಾರಿಗಳು, 8 ವಿಧಾನಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು ಹಾಗೂ ಡಿಸಿಸಿ ಎಲ್ಲ ಹಂತದ ಪದಾಧಿಕಾರಿಗಳು ಹಕ್ಕೋತ್ತಾಯಕ್ಕೆ ಅಧಿಕೃತವಾಗಿ ಸಹಿ ಮಾಡಿ, ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್ ಗೆ ರವಾನಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಾನು ರಾಜಕೀಯಕ್ಕೆ 2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ ವಿಜಯ್ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ, ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಕಾರ ಬಹಳಷ್ಟಿದೆ, ಅದನ್ನ ನಾವು ಮರೆಯುವುದು ಮನುಷ್ಯತ್ವದ ಗುಣವಲ್ಲ ಎಂದರು.ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅವರ ಶ್ರಮವನ್ನ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರಾಗಿರುವ ಎಲ್ಲರೂ ಮರೆಮಾಚಲು ಸಾಧ್ಯವಿಲ್ಲ. ಹೀಗಾಗಿ, ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ ಹಾಗೂ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಪಕ್ಷಕ್ಕಾಗಿ 7 ಎಫ್ಐಆರ್ ದಾಖಲಿಸಿಕೊಂಡು ಹೊರಡುತ್ತಿರುವ ಡಾ.ಬಿ.ಜೆ. ವಿಜಯ್ ಕುಮಾರ್ ನಿಷ್ಠೆ ಎಂತಹದ್ದು ಎಂದು ತಿಳಿಯುತ್ತದೆ. ಅಧಿಕಾರದಲ್ಲಿದ್ದು ಜನ ಸೇವೆ ಮಾಡೋದು ಕಷ್ಟ, ಅದರಲ್ಲೂ ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮಣ್ಣನೇ ಗಳಿಸುವುದು ಬಹಳ ಕಷ್ಟ. ಈ ಬಾರಿ ವಿಜಯ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡುತ್ತದೆಂಬ ವಿಶ್ವಾಸವಿದೆ ಎಂದರು.ಕೆ.ಆರ್. ನಗರ ಕ್ಷೇತ್ರದ ಶಾಸಕ ಡಿ. ರವಿಶಂಕರ್ ಮಾತನಾಡಿ, ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದ ಯಾವ ಅಪೇಕ್ಷೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದು ನನ್ನ ಮಿತ್ರ ವಿಜಯಕುಮಾರ್ ಎಂದರು.
ಎಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ಶಾಸಕರು ಅತ್ಯಂತ ಒಗ್ಗಟ್ಟಿನಿಂದ ಕೆಲಸ ಮಾಡಲು ಚುನಾವಣೆ ಗೆಲ್ಲಲು ವಿಜಯ್ ಕುಮಾರ್ ಅವರ ಸಹಕಾರವಿದೆ ಎಂದರು.ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ದರ್ಶನ್ ರವನಾರಾಯಣ, ಕೆ.ಹರೀಶ್ ಗೌಡ, ಮಾಜಿ ಶಾಸಕರಾದ ಮರಿತಿಬ್ಬೇಗೌಡ, ಜಿ.ಎನ್.ನಂಜುಂಡಸ್ವಾಮಿ, ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಸುನೀತಾ ವೀರಪ್ಪಗೌಡ, ಬನ್ನೂರು ಎಂ. ಕೃಷ್ಣಪ್ಪ, ಧರ್ಮಸೇನ, ವಿವಿಧ ನಿಗಮಗಳ ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಎಚ್.ಡಿ. ಗಣೇಶ್ ರಾಮಪ್ಪ, ರಾಮಪ್ಪ ಭೋವಿ, ಅನಂತ, ಮೂಡಾ ಮಾಜಿ ಅಧ್ಯಕ್ಷರಾದ ಕೆ. ಮರಿಗೌಡ, ಎಚ್.ವಿ. ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಾದೇವ್, ಮಾಜಿ ಮೇಯರ್ ಗಳಾದ ಪುರುಷೋತ್ತಮ್, ಟಿ.ಬಿ. ಚಿಕ್ಕಣ್ಣ ಮೊದಲಾದವರು ಇದ್ದರು.