- ಪುತ್ರ ಸಮರ್ಥ ಅಭ್ಯರ್ಥಿ ಎಂದು ಎಸ್ಸೆಸ್ಸೆಂ ಅಧಿಕೃತವಾಗಿ ಹೇಳಿಲ್ಲ - - -

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಸಮಾಜದ ಮುಖಂಡರು, ಧರ್ಮಗುರುಗಳು ಸಭೆ ಮೂಲಕ ಮನವಿ ಮಾಡಿದ್ದೇವೆ. ಕ್ಷೇತ್ರದ ಉಪ ಚುನಾವಣೆಗೆ ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷಗಳಿಂದ ಪಕ್ಷದ ವಿವಿಧ ಹಂತಗಳಲ್ಲಿ ಹುದ್ದೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಈಗ ಕೆಪಿಸಿಸಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯರಾಗಿ ಕಾಂಗ್ರೆಸ್ ಸಂಘಟನೆಗಾಗಿ ದುಡಿದಿದ್ದೇನೆ. ಮುಸ್ಲಿಂ ಸಮಾಜದ ಧರ್ಮಗುರುಗಳು, ಮುಖಂಡರು, ಸಮಾಜ ಬಾಂಧವರು ಸಭೆ ಮಾಡಿ, ದಕ್ಷಿಣದ ಉಪ ಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಪಕ್ಷಾತೀತವಾಗಿ ಒತ್ತಾಯಿಸಿದ್ದಾರೆ. ಅದರಂತೆ ಈ ಉಪ ಚುನಾವಣೆಯಲ್ಲಿ ತಾವೂ ಆಕಾಂಕ್ಷಿಯಾಗಿದ್ದು, ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದರು.

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮುಸ್ಲಿಂ ಸಮುದಾಯಕ್ಕೆ ದಕ್ಷಿಣ ಉಪ ಚುನಾವಣೆಯಲ್ಲಿ ಅವಕಾಶ ನೀಡುವ ಜೊತೆಗೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವರೆಂಬ ವಿಶ್ವಾಸವಿದೆ. ಇದುವರೆಗೂ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ತಮ್ಮ ಪುತ್ರ ಸಮರ್ಥ್‌ ಅಭ್ಯರ್ಥಿ ಎಂಬುದಾಗಿ ಅಧಿಕೃತವಾಗಿ ಹೇಳಿಲ್ಲ. ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವುದಾದರೆ ನಾನೂ ಆಕಾಂಕ್ಷಿ. ಒಂದುವೇಳೆ ಸಮರ್ಥ ಅವರಿಗೆ ಟಿಕೆಟ್ ನೀಡಿದರೆ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ಹುಸೇನ್‌ ಸ್ಪಷ್ಟಪಡಿಸಿದರು.


ಈ ಸಂದರ್ಭ ಮುಖಂಡರಾದ ಇಬ್ರಾಹಿಂ ಹುಸೇನ್, ಸಮೀರ್ ಹುಸೇನ್, ಹೈದರ್ ಅಲಿ ಇತರರು ಇದ್ದರು.

- - -

-3ಕೆಡಿವಿಜಿ3: ದಾವಣಗೆರೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.