ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪಗೆ ಎಂಎಲ್‍ಸಿ ಸ್ಥಾನ ನೀಡಿ

| Published : May 27 2024, 01:12 AM IST

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಕುರುಬ ಸಮಾಜ ಮುಖಂಡ ಎಚ್.ಬಿ. ಮಂಜಪ್ಪ ಅವರಿಗೆ ಎಂಎಲ್‍ಸಿ ಸ್ಥಾನ ನೀಡಬೇಕು ಎಂದು ತಾಲೂಕು ಕುರುಬ ಸಮಾಜ ಕಾರ್ಯಾಧ್ಯಕ್ಷ ಧರ್ಮಪ್ಪ ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

- ಹೊನ್ನಾಳಿ ತಾಲೂಕು ಕುರುಬ ಸಮಾಜ ಮುಖಂಡರ ಒತ್ತಾಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಕುರುಬ ಸಮಾಜ ಮುಖಂಡ ಎಚ್.ಬಿ. ಮಂಜಪ್ಪ ಅವರಿಗೆ ಎಂಎಲ್‍ಸಿ ಸ್ಥಾನ ನೀಡಬೇಕು ಎಂದು ತಾಲೂಕು ಕುರುಬ ಸಮಾಜ ಕಾರ್ಯಾಧ್ಯಕ್ಷ ಧರ್ಮಪ್ಪ ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅವುಗಳ ಪೈಕಿ 5 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಎಚ್.ಬಿ. ಮಂಜಪ್ಪ ಅವರ ಸೇವೆ ಮತ್ತು ಹಿರಿತನವನ್ನು ಪರಿಗಣಿಸಿ ಎಂಎಲ್‍ಸಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಎಚ್.ಬಿ. ಮಂಜಪ್ಪ 30 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪ.ಪಂ. ಅಧ್ಯಕ್ಷ, ತಾ.ಪಂ. ಅಧ್ಯಕ್ಷ, ಜಿ.ಪಂ. ಅಧ್ಯಕ್ಷರಾಗಿ ದುಡಿದಿದ್ದಾರೆ. ಜೊತೆಗೆ ಪತ್ನಿಯನ್ನು ಜಿ.ಪಂ. ಸದಸ್ಯರನ್ನಾಗಿ ಮಾಡಿದ ರಾಜಕಾರಣಿ. ಪಕ್ಷದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ, ತಾಲೂಕು ಕಾಂಗ್ರೆಸ್ ಅಧ್ಯಕ್ಷ, ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವರ ಹೆಸರನ್ನು ಘೋಷಣೆ ಮಾಡಿತ್ತು, ಆದರೆ, ಕೊನೆ ಗಳಿಗೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಲಾಯಿತು. 2018ರ ಚುನಾವಣೆಯಲ್ಲಿ ಮತ್ತು 2024ರ ಚುನಾವಣೆಯಲ್ಲೂ ಅವರ ಹೆಸರು ದೆಹಲಿಮಟ್ಟಕ್ಕೆ ಹೋಗಿಯೂ ಟಿಕೆಟ್ ಕೈ ತಪ್ಪಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಚುನಾವಣೆಗೆ ಕೊನೆ ಗಳಿಗೆಯಲ್ಲಿ ಪಕ್ಷ ಎಚ್.ಬಿ. ಮಂಜಪ್ಪ ಅವರಿಗೆ ಟಿಕೆಟ್ ಕೊಟ್ಟಿತ್ತು, ಇಷ್ಟ ಇಲ್ಲದಿದ್ದರೂ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೂಚನೆಗೆ ತಲೆಬಾಗಿ ಚುನಾವಣೆ ಎದುರಿಸಿದರು. ಕೇವಲ 20 ದಿನಗಳ ಪ್ರಚಾರದಲ್ಲಿ 4.85 ಲಕ್ಷ ಮತಗಳನ್ನು ಅವರು ಪಡೆದುಕೊಂಡರು ಎಂದು ವಿವರಿಸಿದರು.

2024 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ಕೊಡಬೇಕಾಗಿತ್ತು, ಆದರೆ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿಗೆ ಟಿಕೆಟ್ ನೀಡುವ ಸುಳಿವು ಸಿಕ್ಕಿದ್ದರಿಂದ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆಯಂತೆ ತಟಸ್ಥರಾದರು. ಇಷ್ಟಾದರೂ ಅವರು ಎಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಲಿಲ್ಲ. ಪಕ್ಷಕ್ಕೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ಎಸ್.ಎಸ್. ಮಲ್ಲಿಕಾರ್ಜುನ್ ಕಳೆದ ಬಾರಿ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಮುಂದೆ ಪಕ್ಷ ಅಧಿಕಾರ ನೀಡುತ್ತದೆ ಎಂದಿದ್ದರು. ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಡಾ. ಪ್ರಭಾ ಪರವಾಗಿ ಪ್ರಚಾರ ಮಾಡಿದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಎಚ್.ಬಿ. ಮಂಜಪ್ಪ ಅವರಿಗೆ ಎಂಎಲ್‍ಸಿ ಸ್ಥಾನ ನೀಡಬೇಕು. ಇದರಿಂದ ಜಿಲ್ಲಾ ಕುರುಬ ಸಮಾಜಕ್ಕೆ ಹಾಗೂ ಅಹಿಂದ ವರ್ಗಕ್ಕೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಪಕ್ಷದ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನೆಲಹೊನ್ನೆ ಮೋಹನ್‌, ಅವಳಿ ತಾಲೂಕು ಕುರುಬ ಸಮಾಜದ ಉಪಾಧ್ಯಕ್ಷರಾದ ಎಚ್.ನರಸಪ್ಪ, ಹರಳಹಳ್ಳಿ ಬೆನಕಪ್ಪ, ಕುಂಬಳೂರು ವಾಗೀಶ್, ಬಸವನಹಳ್ಳಿ ಬಸವರಾಜ್, ಎಚ್.ಡಿ. ವಿಜೇಂದ್ರಪ್ಪ, ಕೆ. ಪುಟ್ಟಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ ಇತರರು ಇದ್ದರು.

- - -