ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವಕೀಲರು ತಮ್ಮ ವೃತ್ತಿ ಜೀವನದದೊಂದಿಗೆ ಆರೋಗ್ಯ ರಕ್ಷಣೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಹರಿಣಿ ಹೇಳಿದರು.ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಭವನದಲ್ಲಿ ಸೋಮವಾರ ಬೆಂಗಳೂರಿನ ನಿಧಿ ಹೆಲ್ತ್ ಕೇರ್ ಸೆಂಟರ್ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವಕೀಲರು ನ್ಯಾಯಾಲಯದಲ್ಲಿ ಹೂಡುವ ಪ್ರಕರಣಗಳ ಬಗ್ಗೆ ಅಧ್ಯಯನ ಕಕ್ಷಿದಾರರೊಂದಿಗೆ ಚರ್ಚೆ ನಡೆಸುವ ಮತ್ತು ವಾದ ವಿವಾದಗಳನ್ನು ಮಂಡಿಸುವ ದಾವಂತದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ವಕೀಲರು ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಸಹ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ತಮ್ಮ ದೈನಂದಿನ ಕಾರ್ಯ ಕಲಾಪಗಳ ಜೊತೆಗೆ ವಕೀಲರು ವ್ಯಾಯಾಮ, ಧ್ಯಾನ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ವೃತ್ತಿಯೊಂದಿಗೆ ಉತ್ತಮ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಅಜಿತ್ ದೇವರಮನಿ ಮಾತನಾಡಿ, ಮನುಷ್ಯನ ದೇಹದ ಮತ್ತು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯವಾಗಿದೆ. ಇಂದು ನಾವುಗಳು ಆರೋಗ್ಯವಂತ ಜೀವನ ನಡೆಸಬೇಕಾದರೆ ವೈದ್ಯರ ಸೇವೆ ಅತ್ಯಗತ್ಯವಾಗಿದೆ ಎಂದರು.
ವೈದ್ಯರಿಗೆ ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲ ಹಗಲಿರುಳು ಜನರ ಸೇವೆಯಲ್ಲಿ ನಿರತರಾಗಿರುವ ವೈದ್ಯರು ದೇವರ ಸಮಾನ ಎಂದು ಪ್ರತಿಯೊಬ್ಬರೂ ಭಾವಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಸ್.ಸಿ.ನಳಿನಾ, ಎನ್.ವಿ.ಕೋನಪ್ಪ, ಎಸ್.ಪಿ.ಕಿರಣ್, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಶ್ರೀನಿಧಿ ಹೆಲ್ತ್ ಕೇರ್ ಸೆಂಟರ್ ನ ಡಾ.ವೀರೇಶ್, ಸಿಬ್ಬಂದಿ ವಿದ್ಯಾನಂದ, ಗಂಗೋತ್ರಿ, ಪೂಜಾ, ಮಧು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.