ಸಾರಾಂಶ
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಪರಿಶೀಲನಾ ಸಮಿತಿಯ ಅಧ್ಯಕ್ಷ ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ ಸಹ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇನ್ನು ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಮೂಲಕ ಮತ್ತಷ್ಟು ಬಲವರ್ಧನೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮೈಸೂರು ವಿಭಾಗದ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಉಪ ಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಸತ್ಯ ಶೋಧನಾ ಸಮಿತಿ ಪರಿಶೀಲನಾ ತಂಡದ ನೇತೃತ್ವ ವಹಿಸಿ ಮಾತನಾಡಿ, ಮಾಜಿ ಸಚಿವ ದಿ.ಎಚ್.ಎಸ್. ಮಹದೇವಪ್ರಸಾದ್, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷವನ್ನು ಸಧೃಢವಾಗಿ ಕಟ್ಟುವ ಜೊತೆಗೆ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಹಾಕಿದ ಭದ್ರಬುನಾದಿಯಲ್ಲಿ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷವವನ್ನು ಬಲವರ್ಧನೆ ಮಾಡಬೇಕು. ಎರಡನೇ ಹಂತದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಬೇಕು ಎಂದರು. ಚಾಮರಾಜನಗರ ಲೋಸಕಭಾ ಕ್ಷೇತ್ರದ ಚುನಾವಣೆಯ ಗೆಲುವು ಇತರೇ ಜಿಲ್ಲೆಗಳು ಹಾಗೂ ಕ್ಷೇತ್ರಗಳಿಗೆ ಮಾದರಿಯಾಗಿದೆ. 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸುವ ಮೂಲಕ ಅಭೂತ ಪೂರ್ವ ಗೆಲುವು ತಂದು ಕೊಟ್ಟೀದ್ದೀರಿ. ಈ ಗೆಲುವು ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಅನುಸರಿಸಿ ಕ್ರಮಗಳು ಮತ್ತು ಕಾರ್ಯ ವಿಧಾನಗಳನ್ನು ಹಂಚಿಕೊಳ್ಳಬೇಕು. ಇತರೇ ಕ್ಷೇತ್ರಗಳಿಗೂ ಇದನ್ನು ಅನ್ವಯಿಸಿ ಗೆಲುವು ಸಾಧ್ಯವಾಗುತ್ತದೆ. ೧೦ ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಅಧಿಕಾರ ನೀಡುವ ಮೂಲಕ ಹೊಸಬರಿಗೆ ಬ್ಲಾಕ್ ಅಧ್ಯಕ್ಷ ಸ್ಥಾನ ನೀಡಲು ಕೆಪಿಸಿಸಿ ಚಿಂತನೆ ಮಾಡಿದೆ. ಇಂಥವರ ಪಟ್ಟಿ ನೀಡಬೇಕು. ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದ್ದು, ಯುವಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಸುದರ್ಶನ ತಿಳಿಸಿದರು. . ಸಂಘಟನೆಯಂತ ಬಂದಾಗ ಸಂಸದರು, ಶಾಸಕರು ಹಾಗೂ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿ, ಸಂಘಟನೆಗೆ ಮುಜುಗರ ತರುವುದು ಬೇಡ. ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷಕ್ಕೆ ನಿಷ್ಠೆಯಿಂದ ದುಡಿದರೆ, ಖಂಡಿತ ಅಧಿಕಾರ ದೊರೆಯುತ್ತದೆ. ಇದನ್ನು ಪಡೆದುಕೊಳ್ಳಲು ಸಹನೆ, ತಾಳ್ಮೆ ಇರಬೇಕು. ಕ್ಷೇತ್ರದ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ದೊರೆಯುವಂತೆ ಮಾಡಬೇಕು. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಹೊಂದಾಣಿಕೆಯೊಂದಿಗೆ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದರು.ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮುರ್ತಿ, ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಪಕ್ಷ ಸದೃಢವಾಗಿ ಸಂಘಟನೆಯಾಗುತ್ತಿದೆ. ಇದರೊಟ್ಟಿಗೆ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಜೊತೆಗೆ ಇತರೇ ಚುನಾವಣೆಗಳು ಬಂದಾಗ ಅವರಿಗೆ ತಕ್ಕ ಉತ್ತರ ನಾವು ನೀಡಬೇಕಾಗಿದೆ. ನಮ್ಮದು ಜಾತ್ಯತೀತ ಹಾಗೂ ಎಲ್ಲಾ ವರ್ಗ ಒಳಗೊಂಡಿರುವ ಪಕ್ಷವಾಗಿದೆ. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗೆಗೆ ಹೆಚ್ಚಿನ ಕಾಳಜಿ ಹೊಂದಿ ಅವರ ಶ್ರೇಯೋಭಿವೃದ್ದಿಗೆ ದುಡಿಯುತ್ತಿದೆ. ಸಹಕಾರ ಸಂಘಗಳ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಕ್ರಿಯವಾಗಬೇಕು. ಜನರಿಗೆ ಉತ್ತಮ ಕೆಲಸವನ್ನು ಮಾಡಿಕೊಡಲು ಮುಂದಾಗಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯ ತಂಡ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಜಿಲ್ಲೆಯಲ್ಲಿ ಮತ್ತಷ್ಟು ಗಟ್ಟಿಯಾಗಿ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದರು. ಸಭೆಯಲ್ಲಿ, ಸತ್ಯ ಶೋಧನಾ ಸಮಿತಿಯ ಸದಸ್ಯರಾದ ಶಾಸಕ ಸಿ.ರಘುಮೂರ್ತಿ, ಮಾಜಿ ಶಾಸಕ ವೆಂಕಟರಮಣಯ್ಯ, ಕೆಪಿಸಿಸಿ ಉಪಾಧ್ಯಕ್ಷ ಸೂರಾಜ್ ಹೆಗಡೆ, ಸಿ.ಎಸ್.ದ್ವಾರಕನಾಥ್ ಮಾಜಿ ಶಾಸಕರಾದ ಎಸ್. ಜಯಣ್ಣ, ಆರ್.ನರೇಂದ್ರ, ಕೆಪಿಸಿಸಿ ವೀಕ್ಷಕರಾದ ಬಸವರಾಜು, ಸದಸ್ಯರಾದ ಶಿವನಾಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಬ್ಲಾಕ್ ಅಧ್ಯಕ್ಷರಾದ ಗುರುಸ್ವಾಮಿ,ಜಿ.ಪಂ. ಮಾಜಿ ಸದಸ್ಯರಾದ ಸದಾಶಿವಮೂರ್ತಿ, ಮಹೇಶ್, ಪು.ಶ್ರೀನಿವಾಸನಾಯಕ, ಸಿ.ಎ.ಮಹದೇವಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಭಾಗ್ಯಮ್ಮ, ಹೊಂಗನೂರು ಜಯರಾಜ್, ಗೌಡಹಳ್ಳಿ ರಾಜೇಶ್, ಕಾರ್ಮಿಕರ ವಿಭಾಗದ ಅಧ್ಯಕ್ಷ ಮಹೇಶ್ ಇದ್ದರು.