ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಆನಂದಪುರ ಕೆಪಿಎಸ್ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣವನ್ನು ಕಲಿಯಬೇಕು. ಶಿಕ್ಷಣವೊಂದಿದ್ದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಸಾಗರ ಹೊಸನಗರ ಕ್ಷೇತ್ರದಲ್ಲಿ ಕಡ್ಡಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಕಲಿಕೆಗೆ ಬೇಕಾಗುವಂತಹ ಪೂರಕ ವಸ್ತುಗಳಿಗೆ ನಮ್ಮ ಸಹಕಾರವಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಉನ್ನತಿಗೆ ಶ್ರಮಿಸುತ್ತಿರುವ ತಂದೆ ತಾಯಿಗಳ ಆಸೆಯನ್ನು ಈಡೇರಿಸುವಂತ ಮಕ್ಕಳಾಗಬೇಕು. ಮುಂದಿನ ದಿನಗಳಲ್ಲಿ ಕಾಲೇಜುಗಳಿಗೂ ಬಿಸಿ ಊಟದ ವ್ಯವಸ್ಥೆ ವಿಸ್ತರಣೆಗೊಳ್ಳಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತಂದು ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ನೂರರಷ್ಟು ಫಲಿತಾಂಶ ಪಡೆಯುವಂತೆ ವಿದ್ಯಾರ್ಥಿಗಳು ಶ್ರಮಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ನೆರವೇರಿಸಿದ ಸಾಗರ ಇಂದಿರಾಗಾಂಧಿ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ರತ್ನಾಕರ ಕುನುಗೋಡು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಂತರಾಳದ ಶಿಕ್ಷಣ ಎಂಬ ಜ್ಯೋತಿಯನ್ನು ಹಚ್ಚುವುದರ ಮೂಲಕ ಗುರಿ ಮುಟ್ಟಲು ಮುಂದಾಗಿ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ತನ್ನದೇ ಆದ ಒಂದು ಪ್ರತಿಭೆ ಇರುತ್ತದೆ. ಇಂದಿನ ವಿದ್ಯಾರ್ಥಿಗಳು ಮುಂದೊಂದು ದಿನ ರಾಷ್ಟ್ರದ ಉತ್ತಮ ಪ್ರಭಾವಿ ಹಾಗೂ ಶ್ರೇಷ್ಠ ವ್ಯಕ್ತಿಗಳಾಗಬಹುದು. ಇದಕ್ಕೆ ಉತ್ತಮ ಶಿಕ್ಷಣ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಯಾವುದು ಅಸಾಧ್ಯವಲ್ಲ, ಆದರೆ ಸಾಧಿಸುವಂತಹ ಛಲವಿರಬೇಕು ಎಂದು ತಿಳಿಸಿದರು.ಕಾಲೇಜು ಪ್ರಾಂಶುಪಾಲ ರವಿಕುಮಾರ್ ಮಾತನಾಡಿ, ಈ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ನೂರರಷ್ಟು ಬರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಉಪ ಪ್ರಾಚಾರ್ಯ ಈಶ್ವರಪ್ಪ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ, ಸದಸ್ಯರಾದ ಎನ್. ಉಮೇಶ್, ಬಿ.ಡಿ. ರವಿಕುಮಾರ್, ದೇವು, ಜಗದೀಶ್, ರಂಗನಾಥ್, ಜಗನ್ನಾಥ್, ಗಜೇಂದ್ರ ಯಾದವ್, ಮಮತಾ, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ ರವೀಂದ್ರ, ಕುಮಾರಿ ಸಿರಿಜಾನ್, ಲಲಿತಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರದೊಂದಿಗೆ ಪಾರಿತೋಷಕವನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.