ಇವತ್ತು ನಾವು ಪರಿಸರದ ಸಂರಕ್ಷಣೆ ಮಾಡದಿದಲ್ಲಿ ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ನೀಡಲಾಗದ, ಅವರ ಬದುಕನ್ನು ಅದೋಘತಿಗೆ ದೂಡುವಂತಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಎಷ್ಟೇ ಅಭಿವೃದ್ಧಿ ಕಡೆಗೆ ಮುಖ ಮಾಡಿ ಓಡಿದರು, ಪರಿಸರದೊಂದಿಗೆ ಸಾಗಬೇಕಿದೆ. ಸುಸ್ಥಿತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ. ಇದರಿಂದ ನಮ್ಮ ಹಾಗೂ ಪರಿಸರದ ಅಭಿವೃದ್ಧಿಯನ್ನು ಒಟ್ಟಿಗೆ ಕೊಂಡೊಯ್ಯಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಪ್ರೊ.ಇ.ಟಿ. ಪುಟ್ಟಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪರಿಸರ ರಕ್ಷಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ನಾವು ಪರಿಸರದ ಸಂರಕ್ಷಣೆ ಮಾಡದಿದಲ್ಲಿ ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ನೀಡಲಾಗದ, ಅವರ ಬದುಕನ್ನು ಅದೋಘತಿಗೆ ದೂಡುವಂತಾಗುತ್ತದೆ ಎಂದು ಎಚ್ಚರಿಸಿದರು.

ಇಂದು ಪರಿಸರ ಕುರಿತಾಗಿ ಪ್ರತಿದಿನ ಸಮಸ್ಯೆಗಳು ಎದುರಾಗುತ್ತಿವೆ. ಹಿಂದೆ ಇದ್ದ ಪರಿಸರದ ಸುವ್ಯವಸ್ಥೆ ಈಗ ತೀರಾ ಹದಗೆಟ್ಟಿದೆ. ಇವತ್ತಿನ ಪರಿಸರದ ಎಲ್ಲಾ ಆಯಾಮಗಳು ಕಲುಷಿತವಾಗಿ, ಯಾವುದೂ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಪ್ರಸ್ತುತ ಬದುಕಲು ಜಗತ್ತಿನ ಯಾವುದೇ ನಗರಗಳು ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಉಸಿರಾಡುವ ಗಾಳಿ ಮಲೀನವಾಗಿ, ಗಾಳಿ ಶುದ್ಧಿಕರಣ ಉಪಕರಣಗಳನ್ನು ಬಳಸುವ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ಮೈಸೂರು ಸಹ ಬದುಕಲು ಯೋಗ್ಯವಲ್ಲ ನಗರದ ಸಾಲಿಗೆ ಸೇರಲಿದೆ ಎಂದು ಅವರು ಎಚ್ಚರಿಸಿದರು.

ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್‌ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್. ಆನಂದ್ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್ ರಾಜ್, ಡೀನ್ ಗಳಾದ ಡಾ.ಎಸ್.ಆರ್. ಚಂದ್ರೇಗೌಡ, ಪ್ರೊ.ಎಂ. ರಾಮನಾಥಂ ನಾಯಡು ಮೊದಲಾದವರು ಇದ್ದರು.