ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ

| Published : Jan 02 2024, 02:15 AM IST

ಸಾರಾಂಶ

ಸಣ್ಣ ರೈತರು ಕಡಿಮೆ ಅವಧಿಯ ಮತ್ತು ಒಣ ಪ್ರದೇಶಕ್ಕೆ ಸೂಕ್ತವಾದ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸಣ್ಣ ರೈತರು ಕಡಿಮೆ ಅವಧಿಯ ಮತ್ತು ಒಣ ಪ್ರದೇಶಕ್ಕೆ ಸೂಕ್ತವಾದ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 46ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರವು ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ತೋಟಗಾರಿಕೆ ಸಸಿಗಳ ಉತ್ಪಾದನೆ, ಮುಂಚೂಣಿ ಪ್ರಾತ್ಯಕ್ಷಿಕೆಗಳು, ತರಬೇತಿ ಮುಂತಾದ ಚಟುವಟಿಗಳನ್ನು ಆಯೋಜಿಸುತ್ತಿದ್ದು ರೈತರ ಅವುಗಳ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಜಿಲ್ಲೆಯಲ್ಲಿ ಸಿರಿಧಾನ್ಯ ಬೇಸಾಯ ಹಾಗೂ ಕೃಷಿಯಲ್ಲಿ ಜೈವಿಕ ಗೊಬ್ಬರ/ಪೀಡೆನಾಶಕಗಳ ಬಳಕೆಯನ್ನು ಉತ್ತೇಜಿಸುವ ಅಗತ್ಯವಿದೆ. ನೀರು ಮತ್ತು ಮಣ್ಣು ಸಂರಕ್ಷಣೆ ಕುರಿತು ಅಭಿಯಾನ ಮಾಡಬೇಕು ಹಾಗೂ ರೈತ ಉತ್ಪಾದಕ ಸಂಘ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳವನ್ನು ಆಯೋಜಿಸಬಹುದು ಎಂದರು.

ಬೆಂಗಳೂರಿನ ಅಟಾರಿ ಪ್ರಧಾನ ವಿಜ್ಞಾನಿ ಡಾ. ಡಿ.ವಿ.ಎಸ್. ರೆಡ್ಡಿ ಮಾತನಾಡಿ, ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಮತ್ತು ರಸಮೇವು ಉತ್ಪಾದನೆ ಪ್ರಾತ್ಯಕ್ಷಿಕೆ ಘಟಕಗಳನ್ನು ಸ್ಥಾಪಿಸುವುದು ಹಾಗೂ ಕೇಂದ್ರವು ಹಮ್ಮಿಕೊಂಡ ನವೀನ ಕೃಷಿ ತಾಂತ್ರಿಕೆಗಳ ಪ್ರಾತ್ಯಕ್ಷಿಕೆಗಳನ್ನು ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ರೈತ ಸಮುದಾಯಕ್ಕೆ ಪರಿಚಯ ಮಾಡಬೇಕೆಂದು ತಿಳಿಸಿದರು.

ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಮಾತನಾಡಿ, ಮಿಶ್ರ ಮೇವು ಉತ್ಪಾದನೆ, ಅಂತರ ಬೆಳೆ, ಹನಿ ನೀರಾವರಿ ಮತ್ತು ಗೋಡಂಬಿಯಲ್ಲಿ ಹೊಸ ತಳಿಯನ್ನು ಜನಪ್ರಿಯಗೊಳಿಸುವ ಕುರಿತು ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳುವ ಹಾಗೂ ಅಲ್ಪಾವಧಿಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥ ಡಾ. ಜೆ.ಎಸ್. ಹಿಳ್ಳಿ ಡೀನ್ (ಕೃಷಿ), ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡುವ ತಾಂತ್ರಿಕತೆಗಳನ್ನು, ಸಮಗ್ರ ಕೃಷಿ ಪದ್ಧತಿಗಳನ್ನು ರೈತರು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯಗಳ ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತಿನ ಬಗ್ಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.

ಸ್ಥಳೀಯ ಪ್ರಗತಿಪರ ರೈತರು ಹಾಗೂ ಸಮಿತಿ ಸದಸ್ಯರಾದ ಪರಮೇಶ್ವರಪ್ಪ ಹಲಗೇರಿ ಮತ್ತು ಚಂದ್ರಕಾಂತ ಸಂಗೂರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಜಿಲ್ಲೆಯ ವೈವಿಧ್ಯಮಯ ಬೆಳೆ ಪ್ರಾತ್ಯಕ್ಷಿಕೆಗಳನ್ನು ಹಾಗೂ ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್(ಸು-ಕೃಷಿ)ನ್ನು ಗಣ್ಯರು ಅನಾವರಣಗೊಳಿಸಿದರು ಹಾಗೂ ವಿವಿಧ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಿದರು.

ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಉಪಸ್ಥಿತರಿದ್ದು ಸಂದರ್ಭಕ್ಕೆ ಅವಶ್ಯವಿದ್ದ ಮಾಹಿತಿಯನ್ನು ಸಭೆಗೆ ನೀಡಿ ಸಮಿತಿ ಸದಸ್ಯರಿಂದ ಇನ್ನೂ ಹೆಚ್ಚಿನ ಸಲಹೆಗಳನ್ನು ಪಡೆದರು.