ಸಾರಾಂಶ
ಮುಂಡಗೋಡ: ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಕಾಯ್ದಿರಿಸಿ ಸಮುದಾಯದ ಅಭಿವೃದ್ಧಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು ಬುಧವಾರ ಪ್ರತಿಭಟನೆ ನಡೆಸಿ, ಮುಂಡಗೋಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಹೆಚ್ಚಾಗಿದ್ದಾರೆ. ಈ ಸಮುದಾಯದ ಜನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀವ್ರ ಹಿಂದುಳಿದಿದ್ದಾರೆ. ಉದ್ಯೋಗ ಕೂಡಾ ಇಲ್ಲದೆ ಅತ್ಯಂತ ಕಡು ಬಡತನದ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಆರ್ಥಿಕ ಸಹಾಯ ಇಲ್ಲದೆ ಯಾವುದೇ ಸಮುದಾಯ ಮುಂದುವರಿದ ಜನರ ಸರಿಸಮಾನವಾಗಿ ಬದುಕಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.ಸ್ವಾತಂತ್ರ್ಯ ಬಂದು ೭೮ ವರ್ಷ ಕಳೆದು ಸಂವಿಧಾನ ಜಾರಿಗೆ ಬಂದು ೭೫ ವರ್ಷಗಳು ಸಂದರೂ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಆರ್ಥಿಕವಾಗಿ ಅಭಿವೃದ್ಧಿಯಾಗಿಲ್ಲ. ಅವರು ತಮ್ಮ ಸ್ವಂತ ಕಾಲ ಮೇಲೆ ನಿಂತು ಬದುಕುವ ಸ್ಥಿತಿ ನಿರ್ಮಾಣವಾಗಿಲ್ಲ. ಇದಕ್ಕೆಲ್ಲ ರಾಜಕೀಯ ಪಕ್ಷಗಳು ಮತ್ತು ಆಳುವ ಸರ್ಕಾರಗಳು ಕಾರಣ. ಈ ಸಮುದಾಯದ ಅಭಿವೃದ್ಧಿ ಬಗ್ಗೆ ಚುನಾವಣೆ ಬಂದಾಗ ಅನೇಕ ಭರವಸೆಗಳನ್ನು ಕೊಟ್ಟು, ಅಧಿಕಾರಕ್ಕೆ ಬಂದ ಆನಂತರ ಮರೆಯುತ್ತಾರೆ. ಹೀಗಾಗಿ ಈ ಸಮುದಾಯದ ಶೇ. ೭೫ರಷ್ಟು ಜನರು ಹಿಂದುಳಿದಿದ್ದಾರೆ. ಸ್ವಂತ ಉದ್ಯೋಗವಿಲ್ಲದೆ, ಸ್ವಂತ ಜಮೀನು-ಆಸ್ತಿ ಇಲ್ಲದೆ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ.
೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ತಲಾ ಒಂದು ನಿಗಮಕ್ಕೆ ₹೧೦೦೦ ಕೋಟಿ ಅನುದಾನ ಕಾಯ್ದಿರಿಸಿ, ಈ ಸಮಾಜದ ಜನಸಾಮನ್ಯರು, ಮಹಿಳೆಯರು, ಉದ್ದಿಮೆದಾರರು, ನಿರುದ್ಯೋಗಿ ಯುವಕರು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಬದುಕು ಕಟ್ಟಿಕೊಳ್ಳುವ ಯೋಜನೆಗಳನ್ನು ಜಾರಿಗೆ ತಂದು ಸಮುದಾಯ ಅಭಿವೃದ್ಧಿಪಡಿಸಬೇಕು ಎಂದು ಕೋರಿದ್ದಾರೆ.ಪರಿಶಿಷ್ಟ ಮತ್ತು ಹಿಂದುಳಿದ ವರ್ಗದ ಸಮುದಾಯದ ಜನರಿಗೆ ಆದಾಯ ಮಿತಿ ತೆಗೆದು ಹಾಕಬೇಕು ಅಥವಾ ಆದಾಯ ಮಿತಿ ₹೧೨ ಲಕ್ಷಕ್ಕೆ ಏರಿಸಬೇಕು. ಅಲ್ಲದೇ ವಿವಿಧ ಸವಲತ್ತು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ, ಹನುಮಂತ ಕಟ್ಟಿಮನಿ, ಗೋಪಾಲ ನಡಕಿನಮನಿ, ಸಂತೋಷ ಕಟ್ಟಿಮನಿ, ಯಲ್ಲವ್ವಾ ಹರಿಜನ, ಜೋಜೆ ಸಿದ್ದಿ, ಹುಲಗಪ್ಪ ಭೋವಿವಡ್ಡರ, ರಾಘವೇಂದ್ರ ಹರಿಜನ, ಪ್ರಭು ಅರಶಿಣಗೇರಿ, ಬಸವರಾಜ ಹಳ್ಳಮ್ಮನವರ, ಪರಶುರಾಮ ಪೂಜಾರ, ನಿಂಗಪ್ಪ ಮೇತ್ರಿ, ಶಿವಾನಂದ ಪೂಜಾರ, ರಮೇಶ ಖಾತೆಧಾರ, ಕೋಟೆಪ್ಪ ಹರಿಜನ, ವಿರೂಪಾಕ್ಷಯ್ಯ ಹಿರೇಮಠ, ದೀಪಕ ಭೋವಿ ವಡ್ಡರ, ಲಕ್ಷ್ಮಣ ಭೋವಿವಡ್ಡರ, ಫಕ್ಕೀರಪ್ಪ ಹರಿಜನ, ಹನುಮಂತ ಹರಿಜನ, ಸಂತೋಷ ಆಲೂರ, ಫಕ್ಕೀರಪ್ಪ ಮನ್ನಂಗಿ, ರಾಜು ಕೊರವರ, ಎಲ್. ನರಸಿಂಹ ಮೂರ್ತಿ, ಸುರೇಶ ತಳವಾರ, ರೇಣುಕಾ ನಾಯ್ಕರ, ರಮೇಶ ಮಾಡಳ್ಳಿ, ಮನೋಹರ ನಡಕಿನಮನಿ, ಭೀಮಸಿ ಹರಿಜನ, ಶರೀಫ ಅಮಗಾಂವ್ ಉಪಸ್ಥಿತರಿದ್ದರು.