ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಅನುದಾನ ನೀಡಿ

| Published : Dec 20 2024, 12:47 AM IST

ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಅನುದಾನ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ: ನ್ಯಾಮತಿ ತಾಲೂಕಿನ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಸಮಸ್ಯೆಗಳೇ ಅನಾವರಣಗೊಂಡಿವೆ. ಶೌಚಾಲಯ, ಮೂಲಭೂತ ಸೌಕರ್ಯ, ಗ್ರಂಥಾಲಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಬೆಳಕಿಗೆ ಬಂದಿವೆ. ಸರ್ಕಾರಿ ಶಾಲೆಗಳ ಉಳಿವು, ಅಭಿವೃದ್ಧಿ, ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾ‍ಳಿ

ಹೊನ್ನಾಳಿ: ನ್ಯಾಮತಿ ತಾಲೂಕಿನ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಸಮಸ್ಯೆಗಳೇ ಅನಾವರಣಗೊಂಡಿವೆ. ಶೌಚಾಲಯ, ಮೂಲಭೂತ ಸೌಕರ್ಯ, ಗ್ರಂಥಾಲಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಬೆಳಕಿಗೆ ಬಂದಿವೆ. ಸರ್ಕಾರಿ ಶಾಲೆಗಳ ಉಳಿವು, ಅಭಿವೃದ್ಧಿ, ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದರು.

ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕಿನ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಅದಾಲತ್ - ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ಕಾರ್ಯಕ್ರಮದಡಿ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.ಹೊನ್ನಾಳಿ - ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸರ್ಕಾರಿ ಶಾಲೆಗೆ ಮೊದಲು ಭೇಟಿ ನೀಡಲಾಯಿತು. ಹಳೆ ಜೋಗ ಮತ್ತು ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳ, ಸವಳಂಗ, ಸೋಗಿಲು, ಚಟ್ನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಸಮಸ್ಯೆಗಳೇ ಕಣ್ಮುಂದೆ ಬಂದವು. ಸಾಮಾಜಿಕ ನ್ಯಾಯ ಕೇವಲ ಭಾಷಣದಲ್ಲಿ ಇದ್ದರೆ ಸಾಲದು, ಗ್ರಾಮೀಣ ಪ್ರದೇಶಗಳ, ಬಡವರ, ಹಿಂದುಳಿದವರ, ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಬುಧವಾರ ಬೆಳಿಗ್ಗೆಯಿಂದ ಶುರುವಾದ ಶಿಕ್ಷಣ ಅದಾಲತ್ ನಲ್ಲಿ 9 ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟವು ತುಂಬಾನೇ ಕಡಿಮೆಯಾಗಿದೆ. ಬೆಂಗಳೂರು, ದಾವಣಗೆರೆಯಂತಹ ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಸಿಗುತ್ತಿರುವಂಥ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗುವಂತಾಗಬೇಕು ಎಂದರು.

26 ಮಾದರಿ ಪ್ರಶ್ನೆಗಳನ್ನು ಸ್ವಾಭಿಮಾನಿ ಬಳಗವು ತಯಾರಿಸಿದೆ. ಈ ಪ್ರಶ್ನೆಗಳನ್ನು ಮಕ್ಕಳು, ಪೋಷಕರು, ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರಿಗೆ ಕೇಳಲಾಗುವುದು. ಶಾಲೆಗಳಲ್ಲಿನ ಸ್ಥಿತಿಗತಿ ಪರಿಶೀಲಿಸಲಾಗುವುದು. ನಾಲ್ಕು ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳಿಗೆ ಶೌಚಾಲಯವೇ ಇಲ್ಲ. ಕೆಲ ಶಾಲೆಗಳಲ್ಲಿ ಮಳೆ ಬಂದೆರೆ ಸಾಕು, ಕೊಠಡಿಯಲ್ಲಿ ಕುಳಿತುಕೊಳ್ಳಲು ಆಗದು ಎಂದು ಬೇಸರ ವ್ಯಕ್ತಪಡಿಸಿದರು.ಕೆಲ ಶಾಲೆಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ಗಳು ಇಲ್ಲ. ಕೆಲವೆಡೆ ಇದ್ದರೂ ಹಾಳಾಗಿವೆ. ಶಾಲಾ ಗ್ರಂಥಾಲಯವಂತೂ ಇಲ್ಲವೇ ಇಲ್ಲ. ಪ್ರತಿ ಶಾಲೆಗೆ ಹೋದಾಗಲೂ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಶಿಕ್ಷಣದಲ್ಲಿ ಅಸಮಾನತೆ ತೊಲಗಿಸಿ ಸಮಾನ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಿಗುವಂತಾಗಬೇಕು ಎಂಬುದು ಸ್ವಾಭಿಮಾನಿ ಬಳಗದ ಉದ್ದೇಶ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.ಗ್ರಾಮದ ಮುಖಂಡರು, ಶಿಕ್ಷಕರು ಮಾತನಾಡಿ, ಈ ರೀತಿಯ ಕಾರ್ಯಕ್ರಮ ಇದುವರೆಗೆ ಯಾರೂ ಮಾಡಿಲ್ಲ. ಸ್ವಾಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಗತ್ಯವಿದೆ. ಹಳ್ಳಿಗಳಲ್ಲಿನ ಮಕ್ಕಳಲ್ಲಿ ಪ್ರತಿಭೆ, ಬುದ್ಧಿವಂತಿಕೆ ನಗರಪ್ರದೇಶಗಳಿ ವಿದ್ಯಾರ್ಥಿಗಳಿಗಿಂತ ಹೆಚ್ಚೇ ಇದೆ. ಆದ್ರೆ, ಮೂಲಭೂತ ಸೌಲಭ್ಯ ಕೊರತೆ ಇರುವುದರಿಂದ ಸಮಸ್ಯೆಗಳು ಆಗುತ್ತಿವೆ ಎಂದು ಅಳಲು ತೋಡಿಕೊಂಡ ಅವರು ಸರ್ಕಾರಿ ಶಾಲೆಗಳಿಗೆ ಭೇಟಿ ಕಾರ್ಯಕ್ರಮ ನಿರಂತರ ನಡಸಿಕೊಂಡು ಬರಲಾಗುವುದು ಎಂದು ತಿಳಿಸಿದರು.