ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಿ: ಬಿ.ಎನ್. ವಾಸರೆ

| Published : Jul 20 2025, 01:18 AM IST

ಸಾರಾಂಶ

ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ಎಲ್ಲ ಭಾಷೆಗಳಿಗಿಂತಲೂ ಕನ್ನಡ ಭಾಷೆ ಸುಂದರವಾಗಿದೆ

ಯಲ್ಲಾಪುರ: ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ಎಲ್ಲ ಭಾಷೆಗಳಿಗಿಂತಲೂ ಕನ್ನಡ ಭಾಷೆ ಸುಂದರವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.

ಅವರು ಶನಿವಾರ ಟಿ.ಎಂ.ಎಸ್. ಸಭಾಭವನದಲ್ಲಿ ಜಿಲ್ಲಾ ಕಸಾಪ, ಯಲ್ಲಾಪುರ ತಾಲೂಕು ಕಸಾಪ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.

ಇಂಗ್ಲೀಷ್ ಮತ್ತು ವಿದೇಶಿ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ತೀವ್ರ ಆತಂಕ ತರುತ್ತಿದೆ. ಇದು ಭವಿಷ್ಯದ ದೃಷ್ಟಿಯಲ್ಲಿ ಯಾರಿಗೂ ಒಳಿತಾಗದು ಎಂದರು.

ವಿದ್ಯಾರ್ಥಿಗಳು ಪಠ್ಯದ ಜೊತೆ ಒಳ್ಳೆಯ ಗ್ರಂಥಗಳನ್ನು, ಪತ್ರಿಕೆಗಳನ್ನು ಸದಾ ಓದಬೇಕು. ಮತ್ತು ಎಷ್ಟೇ ಎತ್ತರಕ್ಕೆ ನೀವು ಬೆಳೆದರೂ ಕನ್ನಡ ಭಾಷೆಯನ್ನು ಮರೆಯಕೂಡದು. ಕಸಾಪ ಚಟುವಟಿಕೆಗಳಿಗೆ ಸರ್ಕಾರದಿಂದ ಕಳೆದೆರಡು ವರ್ಷಗಳಿಂದ ಹಣ ಬರುತ್ತಿಲ್ಲ. ಆದರೂ ನಾವು ಕಷ್ಟಪಟ್ಟು ಕಳೆದ ೪ ವರ್ಷಗಳಿಂದ ಹಮ್ಮಿಕೊಂಡು ಬಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗಲಿಲ್ಲ. ಕಳೆದ ೪ ವರ್ಷದಲ್ಲಿ ಜಿಲ್ಲಾ ಮಟ್ಟದಲ್ಲಿ ನಮ್ಮ ಪುರಸ್ಕಾರ ಪಡೆದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ಕನ್ನಡದ ಪ್ರೀತಿ ಕಡಿಮೆಯಾಗುತ್ತಿದೆಯೇ ಎಂಬ ಆತಂಕ ನಮ್ಮನ್ನೆಲ್ಲ ಕಾಡುತ್ತಿದೆ ಎಂದರು.

ತಹಶೀಲ್ದಾರ ಚಂದ್ರಶೇಖರ ಹೊಸ್ಮನಿ ಮಾತನಾಡಿ, ನಿಮ್ಮ ಹಾಗೆ ವಿದ್ಯಾರ್ಥಿ ಜೀವನ ಕಳೆದಿದ್ದೇನೆ. ಇಂದು ಕೆಎಎಸ್ ಪಾಸ್ ಮಾಡಿ ಈ ಮಟ್ಟಕ್ಕೆ ಬಂದಿದ್ದೇನೆ. ಅಂದರೆ ನಮಗೆ ನಾವು ಸಾಗುವ ಮಾರ್ಗದಲ್ಲಿ ಗುರಿ ಇರಬೇಕು. ಮೊಬೈಲ್ ಬಳಕೆಯನ್ನು ತೀರಾ ಅಗತ್ಯಕ್ಕಷ್ಟೆ ಬಳಸಿ. ದುರುಪಯೋಗ ಆಗಬಾರದು. ಅದು ನಿಮ್ಮ ಭವಿಷ್ಯಕ್ಕೆ ಮಾರಕವಾಗುತ್ತದೆ. ಆ ದೃಷ್ಟಿಯಿಂದ ಕಸಾಪ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ನಾವು ಮಾತೃಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಲೇಬೇಕು. ಹಾಗೆಯೇ ಅನ್ಯಭಾಷೆಯನ್ನೂ ಪ್ರೀತಿಸಬೇಕು. ಸಂಸ್ಕೃತ ಅತ್ಯಂತ ಪ್ರಭಾವಿ ಭಾಷೆಯಾಗಿದೆ. ಅದು ಜನಸಾಮಾನ್ಯರಿಗೆ ತಲುಪಬೇಕೆಂದು ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ. ಪಾಲಕರಿಗೆ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡ ನಿರ್ಲಕ್ಷಿಸುತ್ತಿದ್ದಾರೆ. ಇದು ಆಗಬಾರದು. ಮಾತೃಭಾಷೆಯಲ್ಲಿ ಮಾತ್ರ ವಾಸ್ತವಿಕ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು ಎಂದರು.

ಯೋಗ ಫೆಡರೇಶನ್ ಆಫ್ ಇಂಡಿಯಾದ ಯಲ್ಲಾಪುರ ಶಾಖಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಇಂದು ವಿದ್ಯಾರ್ಥಿಗಳು ೧೦೦ಕ್ಕೆ ೯೮ ಅಂಕ ಪಡೆದರೂ ಸಾಮಾನ್ಯ ಜ್ಞಾನದ ಅರಿವೇ ಇರುವುದಿಲ್ಲ. ಅದು ಅವರ ಭವಿಷ್ಯಕ್ಕೆ ಮಾರಕ. ಪಾಲಕರೂ ಕೂಡ ಅಂಕವೇ ಪ್ರಧಾನವೆಂದು ಭಾವಿಸಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನದ ಅರಿವೂ ತೀರಾ ಅಗತ್ಯವಾಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಜಿ.ಎನ್. ಭಟ್ಟ ಸ್ವಾಗತಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿದರು. ಕೋಶಾಧ್ಯಕ್ಷ ಡಿ.ಎನ್.ಗಾಂವ್ಕರ ವಂದಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ೧೦೦ ಅಂಕ ಪಡೆದ ತಾಲೂಕಿನ ೩೬ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.