ರೈತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಮಹಾಂತಸ್ವಾಮಿಗಳು

| Published : Feb 27 2024, 01:38 AM IST

ರೈತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಮಹಾಂತಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿ ಏನು ಇಲ್ಲದಿದ್ದರೂ ನಡೆಯುತ್ತದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನನ್ನ ಮರೆತರೆ ಜಗತ್ತು ಸರ್ವ ನಾಶವಾಗಲಿದೆ.

ರೈತ ಸಂಘದ ನಾಮಫಲಕ ಉದ್ಘಾಟನೆ, ಜಾಗೃತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಜಗತ್ತಿನಲ್ಲಿ ಏನು ಇಲ್ಲದಿದ್ದರೂ ನಡೆಯುತ್ತದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನನ್ನ ಮರೆತರೆ ಜಗತ್ತು ಸರ್ವ ನಾಶವಾಗಲಿದೆ. ಇದು ಸತ್ಯ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದುಡಿಯುವ ರೈತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಪ್ಪಾಯಿಕೊಪ್ಪದ ಮಠದ ಮಹಾಂತಸ್ವಾಮಿಗಳು ಹೇಳಿದರು.

ಪಟ್ಟಣದ ಭಗತ್ ಸಿಂಗ್‌ ವೃತ್ತದಲ್ಲಿ ಹಾಗೂ ಹೊಸ ಬಸ್‌ ನಿಲ್ದಾಣದಲ್ಲಿ ರೈತ ಸಂಘದ ನೂತನ ಗ್ರಾಮ ಘಟಕದ ನಾಮಫಲಕ ಅಳವಡಿಕೆ ಹಾಗೂ ರೈತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ರಾಜ್ಯದಲ್ಲಿ ಅನಾವೃಷ್ಟಿಯಿಂದ ಬಳಲುತ್ತಿದ್ದು, ರೈತ ಸಮುದಾಯಕ್ಕೆ ಸರ್ಕಾರದ ನೆರವು ಅಗತ್ಯವಾಗಿದೆ. ಆದ್ದರಿಂದ ಸರ್ಕಾರಗಳು ಸಮಯಕ್ಕೆ ಸರಿಯಾಗಿ ವಿದ್ಯುತ್, ನೀರು, ಸರಿಯಾದ ಮಾರುಕಟ್ಟೆ, ಬೆಂಬಲ ಬೆಲೆ ನೀಡಿದರೆ ಮಾತ್ರ ರೈತ ಸಮುದಾಯ ಉಳಿಯಲು ಸಾಧ್ಯ. ರೈತರು ಸಂಘಟಿತರಾಗಬೇಕು ಆ ಮೂಲಕ ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡದ ಕಾರಣ ರೈತ ಸಮುದಾಯ ನಲುಗಿ ಹೋಗಿದೆ. ಹಗಲಿರುಳು ದುಡಿದು ದೇಶಕ್ಕೆ ಅನ್ನ ನೀಡುವ ರೈತ ಇಂದಿಗೂ ಸಾಲದ ಸುಳಿಗೆ ಸಿಲುಕಿ ನಲುಗಿ ಹೋಗಿದ್ದಾನೆ. ಯಾವ ಸರ್ಕಾರವು ರೈತರ ಕಣ್ಣಿರು ಒರೆಸಲು ಮುಂದಾಗುತ್ತಿಲ್ಲ. ರಾಜಕಾರಣಿಗಳ ಆಸ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಹೊರತು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಟ್ಟೀಹಳ್ಳಿ ಪಟ್ಟಣದ ನೂತನ ಅಧ್ಯಕ್ಷ ಪ್ರಭು ಮುದಿವೀರಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಶಂಕ್ರಪ್ಪ ಶಿರಗಂಬಿ, ಬಸನಗೌಡ ಗಂಗಪ್ಪಳವರ, ಶಂಬಣ್ಣ ಮುತ್ತಗಿ, ಪ್ರಭು ಪ್ಯಾಟಿ, ಗಂಗನಗೌಡ ಪ್ಯಾಟಿ, ಮಲ್ಲನಗೌಡ ಮಾಳಗಿ, ರಂಗಪ್ಪ ಮಲೇಬೆನ್ನೂರ, ಮಹೇಂದ್ರ ತಳವಾರ, ಮಂಜುನಾಥ ಹಾರಿಕಟ್ಟಿ, ರಾಜು ಮುತ್ತಗಿ, ಬಸವರಾಜ ಬಣಕಾರ, ಈರಪ್ಪ ಮುಳ್ಳುರ, ನಿಂಗನಗೌಡ ಪ್ಯಾಟಿಗೌಡ್ರ, ಎ.ಆರ್. ಮಣಕೂರ, ಉಜನೆಪ್ಪ ದ್ಯಾವಕ್ಕಳವರ, ರವಿ ಹದಡೇರ, ರುದ್ರೇಶ ದ್ಯಾವಕ್ಕಳವರ, ಬಸನಗೌಡ ಘಂಟೆಪ್ಪಗೌಡ್ರ, ರಾಜು ಮಳಗೊಂಡರ ಮುಂತಾದವರು ಇದ್ದರು.