ಸಾರಾಂಶ
- ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯಕ್ಕಾಗಿ ವಿಶ್ವ ಕರವೇ ನೇತೃತ್ವದಲ್ಲಿ ಸರ್ಕಾರಕ್ಕೆ ಸಂಘಟನೆಗಳ ಒತ್ತಾಯ - ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಲೋಪಗಳಿಂದಾಗಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ತಹಸೀಲ್ದಾರ್ ಮುಖಾಂತರ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕೆ.ಜಿ.ಯಲ್ಲಪ್ಪ ಮಾತನಾಡಿ, ಕಳೆದ ಆ.27ರಂದು ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿಯ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆದಿದೆ. ಪರೀಕ್ಷೆಯಲ್ಲಿ ಭಾಷಾಂತರ ಲೋಪಗಳು ಕಂಡುಬಂದಿವೆ. ಇದರಿಂದ ಡಿ.29ಕ್ಕೆ ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಮರುಪರೀಕ್ಷೆಯಲ್ಲೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆಪತ್ರಿಕೆಯಲ್ಲಿ ಮತ್ತೆ ಸಾಕಷ್ಟು ತಪ್ಪು ಕಂಡುಬಂದಿದ್ದವು ಎಂದರು.ಇಂಗ್ಲಿಷ್ ಪ್ರಶ್ನೆಪತ್ರಿಕೆ ನೋಡಿ ಸಲೀಸಾಗಿ ಸರಿಯಾದ ಉತ್ತರಿಸಿದ ಅಭ್ಯರ್ಥಿಗಳಿಗೆ ಅಂಕ ಸಿಕ್ಕರೂ, ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಇದರಿಂದ ದೊಡ್ಡ ಅನ್ಯಾಯವಾಗುತ್ತದೆ. ಇದರಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ವಿಫಲರಾಗಲಿದ್ದಾರೆ. 2010, 2011, 2014, 2015 ಹಾಗೂ 2017ನೇ ಸಾಲಿನ ಪ್ರೊಬೆಷನರಿ ನೇಮಕಾತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಖ್ಯ ಪರೀಕ್ಷೆ ಬರೆದು, ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದವರೆ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಆಗಿದ್ದಾರೆ ಎಂದು ಹೇಳಿದರು.
ಕನ್ನಡದಲ್ಲಿ ಆಗ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ನೇಮಕಾತಿ ಪರೀಕ್ಷೆಯಲ್ಲೇ ವಂಚನೆಯಾದಂತಾಗಿದೆ. ಈಚೆಗೆ ಬೆಂಗಳೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದಿಂದ ಡಿ.29ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಶೇ.45ರಿಂದ 50ರಷ್ಟು ಲೋಪದೋಷ ಇರುವುದನ್ನು ಪತ್ತೆ ಮಾಡಲಾಗಿದೆ. ಮತ್ತೊಂದೆಡೆ ವಿದ್ಯಾರ್ಥಿ ಸಂಘಟನೆಯಿಂದ ಬೋಧಕರ ಮೂಲಕ ಪರಿಶೀಲಿಸಿದ್ದು, 23 ಗಂಭೀರ ಲೋಪದೋಷ, 9 ಲಘು ಪ್ರಮಾಣದ ದೋಷ ಸೇರಿದಂತೆ 32 ದೋಷ ಪತ್ತೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಯ ಕನ್ನಡ ಅನುವಾದವನ್ನು ವಿಷಯ ತಜ್ಞರು ಮಾಡಿದ್ದರೆ ಇಷ್ಟೊಂದು ಪ್ರಮಾದ ಆಗುತ್ತಿರಲಿಲ್ಲ ಎಂದರು.ಡಿಸಿ ಕಚೇರಿಯಲ್ಲಿರುವ ತಹಸೀಲ್ದಾರ್ ಕವಿರಾಜ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಮಂಜುನಾಥ ಶೆಟ್ಟಿ, ಕೆ.ವೈ. ಅಲೋಕ, ವಿಶ್ವ ಕರವೇ ಮುಖಂಡರಾದ ಬಾಬುರಾವ್, ಆಜಮ್ ರಜ್ವಿ, ಬಿ.ಇ.ದಯಾನಂದ, ಸಂತೋಷ ದೊಡ್ಮನಿ, ಎಂ.ರವಿ, ಎಂ.ಹನುಮಂತಪ್ಪ, ಸೈಯದ್ ಶಹಬಾಜ್, ಎಂ.ಗದಿಗೆಪ್ಪ, ಅಶೋಕ, ಮಂಜುನಾಥ, ಬಿ.ವಿ.ಗಿರೀಶ, ಕೆ.ಪಿ.ರಂಗನಾಥ, ನವೀನ, ಖಲಂದರ್ ಇತರರು ಇದ್ದರು.
- - -ಬಾಕ್ಸ್ * ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳ ಸುರಿಮಳೆ ಭಾಷೆ ಬಗ್ಗೆ ಸೀಮಿತ ಜ್ಞಾನವಿರುವವರು ಅನುವಾದ ಮಾಡಿರಬಹುದು. ಅನೇಕ ಇಂಗ್ಲಿಷ್ ಪ್ರಶ್ನೆ, ಕನ್ನಡ ಪ್ರಶ್ನೆಯಲ್ಲಿ ಅರ್ಥ ವ್ಯತ್ಯಾಸವಿದೆ. ಕೆಲವು ಅರ್ಥವಾಗುವುದೇ ಇಲ್ಲ ಎಂದು ಯಲ್ಲಪ್ಪ ಆರೋಪಿಸಿದರು.
ಪಾರಿಭಾಷಿಕ ಪದ ಬಳಕೆಯಲ್ಲಿ ಎಡವಲಾಗಿದೆ. ಅವುಗಳನ್ನು ರಚಿಸಿ ವಾಕ್ಯ ರಚಿಸುವಲ್ಲೂ ತಪ್ಪಾಗಿವೆ. ಕೆಲ ವಾಕ್ಯ ರಚನೆಗಳೇ ಸರಿಯಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಿಗರ ಸೇವೆ ಮಾಡುವ ಅಧಿಕಾರಿಗಳ ನೇಮಕಕ್ಕೆ ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಬಿಟ್ಟು ಕನ್ನಡದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಇಂಗ್ಲಿಷ್‌ಗೆ ಅನುವಾದಿಸಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.ತೀರ್ಪನ್ನು ತೀರ್ಮಾನವೆಂದು ಭೂ ಪ್ರದೇಶವನ್ನು ಸ್ಥಳ ಪ್ರದೇಶವೆಂದು ಬರೆಯಲಾಗಿದೆ. ಈ ತಪ್ಪುಗಳಿಂದ ಕನ್ನಡ ಅಭ್ಯರ್ಥಿಗಳಿಗೆ ಆಗ ಅನ್ಯಾಯ ಸರಿಪಡಿಸಲು ಪರೀಕ್ಷೆ ಬರೆದ ಎಲ್ಲ ಅಭ್ಯ ರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಅವರು ಪ್ರಥಮಾದ್ಯತೆ ಮೇಲೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ.ಯಲ್ಲಪ್ಪ ಒತ್ತಾಯಿಸಿದರು.- - -
-27ಕೆಡಿವಿಜಿ2.ಜೆಪಿಜಿ:ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿ, ದಾವಣಗೆರೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.