ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ನಾಮಧಾರಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವಾರು ಸಮರ್ಥ ನಾಯಕರಿದ್ದಾರೆ. ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಕಾರವಾರ: ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ನಾಮಧಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಾಮಧಾರಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವಾರು ಸಮರ್ಥ ನಾಯಕರಿದ್ದಾರೆ. ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಜತೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲೂ ಕೇವಲ ಒಬ್ಬರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾದರೂ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ನಾಮಧಾರಿ, ಬಿಲ್ಲವ, ಈಡಿಗ ಸಮುದಾಯಕ್ಕೆ ವಂಚನೆ ಮಾಡಲಾಗುತ್ತಿದೆ ಎಂದರು.ಪ್ರಜ್ವಲ ರೇವಣ್ಣ ವಿಚಾರವಾಗಿ ಮಾತನಾಡಿ, ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು. ಆದರೆ ಪ್ರಜ್ವಲ್ ವಿಚಾರದಲ್ಲಿ ಎಚ್.ಡಿ. ದೇವೇಗೌಡ ಭಾವಚಿತ್ರಕ್ಕೆ ಚಪ್ಪಲಲ್ಲಿ ಹೊಡೆದಿರುವುದು ಸರಿಯಲ್ಲ. ಅವರು ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಯಾಗಿದ್ದಾರೆ. ಯಾರಿಗೆ ಆದರೂ ಮಕ್ಕಳು, ಮೊಮ್ಮಕ್ಕಳು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ ಎಂದು ತಿಳಿದಿರುವುದಿಲ್ಲ ಎಂದ ಅವರು, ರಮೇಶ ಜಾರಕಿಹೊಳಿ, ಪ್ರಜ್ವಲ ರೇವಣ್ಣ ಪ್ರಕರಣಗಳಿಂದ ರಾಜ್ಯಕ್ಕೆ ಕೆಟ್ಟಹೆಸರು ಬರುತ್ತಿದೆ.
ರಾಮಕೃಷ್ಣ ಹೆಗಡೆ, ಎಸ್. ನಿಜಲಿಂಗಪ್ಪ ಅವರಂತಹ ಮುತ್ಸದ್ದಿ, ಸಚ್ಚಾರಿತ್ರ್ಯ ಹೊಂದಿದ ರಾಜಕಾಣಿಗಳನ್ನು ನೋಡಿದ ನಾಡಿನಲ್ಲಿ ಈ ರೀತಿ ಆಗುತ್ತಿರುವುದು ಖೇದಕರ ಸಂಗತಿ. ಇಂತಹ ಹೊಲಸು ರಾಜಕಾರಣ ಬಿಡಬೇಕು ಎಂದರು.ರಾಷ್ಟ್ರೀಯ ಈಡಿಗ ಮಹಾಮಂಡಳಿದ ದೇವರಾಜ ನಾಯ್ಕ ಇದ್ದರು.