ಆಶ್ರಯ ಕಾಲನಿ ನಿವಾಸಿಗಳಿಗೆ ಪಟ್ಟಾ ನೀಡಿ: ಸಚಿವ ಜಮೀರ್‌

| Published : Jan 25 2024, 02:02 AM IST

ಆಶ್ರಯ ಕಾಲನಿ ನಿವಾಸಿಗಳಿಗೆ ಪಟ್ಟಾ ನೀಡಿ: ಸಚಿವ ಜಮೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಗ್ರಾಮಗಳಿಂದ ಅಹವಾಲುಗಳನ್ನು ಹೊತ್ತು ಜನರು ಸಾಲಾಗಿ ವೇದಿಕೆಗೆ ಬಂದು ಸಚಿವರಿಗೆ ಅಹವಾಲು ಸಲ್ಲಿಸಿದರು.

ಹೊಸಪೇಟೆ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಅವರು ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಜನತಾ ದರ್ಶನ ನಡೆಸಿ ಜನರ ಅಹವಾಲು ಸ್ವೀಕರಿಸಿದರು.ಕಮಲಾಪುರ ಸೇರಿದಂತೆ ಸೀತಾರಾಮ ತಾಂಡಾ, ಬುಕ್ಕಸಾಗರ, ವೆಂಕಟಾಪುರ, ಕಡ್ಡಿರಾಂಪುರ, ಮಲಪನಗುಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಅಹವಾಲುಗಳನ್ನು ಹೊತ್ತು ಜನರು ಸಾಲಾಗಿ ವೇದಿಕೆಗೆ ಬಂದು ಸಚಿವರಿಗೆ ಅಹವಾಲು ಸಲ್ಲಿಸಿದರು. ಅರ್ಜಿಗಳ ಮಹಾಪುರ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಂದಾಯ, ಪುರಸಭೆ, ಸ್ಲಂ ಬೋರ್ಡ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದ ೪೨೪ ಅರ್ಜಿಗಳನ್ನು ಜನರು ಸಲ್ಲಿಸಿದರು. ಈ ವೇಳೆ ಸ್ಥಳದಲ್ಲೇ ೩೬ ಅರ್ಜಿಗಳನ್ನು ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಗವಿಯಪ್ಪನವರು ಇತ್ಯರ್ಥಪಡಿಸಿದರು. ಉಳಿದ ೩೮೮ ಅರ್ಜಿಗಳಲ್ಲಿ ೩೨೪ ಅರ್ಜಿಗಳು ಸ್ಲಂ ಬೋರ್ಡ್‌ಗೆ ಸಂಬಂಧಿಸಿದ ವಸತಿ ಮನೆಗಳಿಗೆ ಸೇರಿದ್ದು, ಇವುಗಳನ್ನು ಬಗೆಹರಿಸಲು ಸೂಚಿಸುವೆ ಎಂದು ಸಚಿವರು ತಿಳಿಸಿದರು.ಬುದ್ಧಿಮಾಂದ್ಯ ಬಾಲಕ, ವೃದ್ಧಗೆ ನೆರವು: ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಬುದ್ಧಿಮಾಂದ್ಯ ಬಾಲಕ ಜಮೀರ್ ಖಾನ್ ತನಗೆ ಮೊಬೈಲ್ ಬೇಕು, ನಾನು ಕೂಡ ಮೊಬೈಲ್ ನೋಡಬೇಕು. ನನಗೆ ಟೈಂ ಪಾಸ್ ಆಗುತ್ತಿಲ್ಲ ಎಂದು ಕೋರಿಕೊಂಡ, ಈ ವೇಳೆ ನಸುನಕ್ಕ ಸಚಿವರು ನೀನು ಮೊಬೈಲ್ ತೆಗೆದುಕೊ ಎಂದು ವೈಯಕ್ತಿಕವಾಗಿ ಧನಸಹಾಯ ನೀಡಿದರು.ಶಾಸಕ ಎಚ್.ಆರ್. ಗವಿಯಪ್ಪ ಅವರು ವೃದ್ಧೆಯೊಬ್ಬರು ತನ್ನ ಸಮಸ್ಯೆ ಹೇಳಿಕೊಂಡ ಹಿನ್ನೆಲೆ ತಕ್ಷಣವೇ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಸಚಿವರು ಅಂಗವಿಕಲರು, ವೃದ್ಧರಿಗೆ ಧನಸಹಾಯ ಮಾಡಿದರು. ಸ್ಥಳದಲ್ಲಿಯೇ ಆದೇಶಪತ್ರ ವಿತರಣೆ: ಜನತಾ ದರ್ಶನದಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಅರ್ಜಿಗಳನ್ನು ಸಲ್ಲಿಸುವ ಮುನ್ನ ಕೌಂಟರ್‌ನಲ್ಲಿ ನೋಂದಾಯಿಸಲು ವ್ಯವಸ್ಥೆ ಮಾಡಿಸಲಾಗಿತ್ತು. ಈ ವೇಳೆ ಗೋಸಮ್ಮ ಎಂಬವರಿಗೆ ವಿಧವಾವೇತನ ಮಾಸಾಶನ ಅಶ್ವತ್ಥಮ್ಮ ಎಂಬವರಿಗೆ ಸಂಧ್ಯಾ ಸುರಕ್ಷಾ ಮಾಸಾಶನ, ಅಂಗವಿಕಲ ಹುಲಗಪ್ಪಗೆ ಅಂಗವಿಕಲ ಪೋಷಣಾ ಮಾಸಾಶನ ಆದೇಶಪತ್ರಗಳನ್ನು ಸಚಿವರು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ವೇದಿಕೆಯಿಂದ ಕೆಳಗಿಳಿದು ಜನರ ಮಧ್ಯೆ ನಡೆದು ಸಾರ್ವಜನಿಕರ ಅಹವಾಲು ಆಲಿಸಿದರು.ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆಯುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಬೈಪಾಸ್ ರಸ್ತೆಯಲ್ಲಿನ ಜಂಬುನಾಥಹಳ್ಳಿಯ ಆಶ್ರಯ ಕಾಲನಿಯ ನಿವಾಸಿಗಳು ತಂಡವಾಗಿ ವೇದಿಕೆಗೆ ಬಂದು ಸಚಿವರಿಗೆ ತಮ್ಮ ಅಹವಾಲನ್ನು ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಈ ನಿವಾಸಿಗಳ ಎಲ್ಲ ಮನೆಗಳಿಗೆ ಹಾಕಿರುವ ದಂಡವನ್ನು ರದ್ದು ಮಾಡಿ ಮೀಟರ್ ಅಳವಡಿಸಲು ಕ್ರಮ ವಹಿಸಬೇಕು. ಪಟ್ಟಾ ಇಲ್ಲದ ಮನೆಗಳಿಗೆ ಪಟ್ಟಾ ಒದಗಿಸಲು ಪರಿಶೀಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರ್ಜಿಗಳ ನೋಂದಣಿಗೆ ಕೌಂಟರ್: ಕಂದಾಯ ಇಲಾಖೆಗೆ ಹೆಚ್ಚಿನ ಅರ್ಜಿಗಳು ಸ್ವೀಕೃತವಾದವು. ಇನ್ನುಳಿದಂತೆ ಜಿಲ್ಲಾ ಪಂಚಾಯತ್‌ಗೆ ೪೧, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ೧೧, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆಗೆ ತಲಾ ೧, ಆರೋಗ್ಯ ಇಲಾಖೆಗೆ ೬ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು. ಮನೆ ಬಾಗಿಲಿಗೆ ಆಡಳಿತ: ಸಚಿವ ಜಮೀರ್ ಅಹಮದ್ ಖಾನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜನತಾ ದರ್ಶನ ಕಾರ್ಯಕ್ರಮವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವದ ಕಾರ್ಯಕ್ರಮವಾಗಿದೆ. ಆಡಳಿತವು ಜನರ ಮನೆಬಾಗಿಲಿಗೆ ಹೋಗಬೇಕು ಎಂಬ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಲು ಬಂದ ಎಲ್ಲ ಅಹವಾಲುದಾರರ ಮನವಿಗಳನ್ನು ಸ್ವೀಕರಿಸಿ ಅವುಗಳ ಬಗ್ಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುವೆ ಎಂದರು. ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಜನರಿಗೆ ಅನುಕೂಲವಾಗುವಂತೆ ನಾವು ಜನತಾ ದರ್ಶನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುವಲ್ಲಿ ಮುತುವರ್ಜಿ ವಹಿಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸಿ ಬದುಕುವ ವಿಶ್ವಾಸ ತುಂಬುತ್ತೇವೆ ಎಂದರು.

ಹಂಪಿ ಉತ್ಸವದಲ್ಲಿ ನಮ್ಮ ಜಿಲ್ಲೆಯ ಹೆಚ್ಚಿನ ಕಲಾವಿದರಿಗೆ ಕಾರ್ಯಕ್ರಮ ಕೊಡಲು ಅವಕಾಶ ನೀಡಿದ್ದೇವೆ. ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.ಶಾಸಕರಾದ ಎಂ.ಪಿ. ಲತಾ ಮಾತನಾಡಿ, ಹಂಪಿ ಉತ್ಸವವನ್ನು ಜನೋತ್ಸವ ಎಂದು ಎಂ.ಪಿ. ಪ್ರಕಾಶ ಅವರು ಕರೆಯುತ್ತಿದ್ದರು. ಅವರ ಆಶಯದಂತೆ ಹಂಪಿ ಉತ್ಸವವು ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಜನತಾ ದರ್ಶನ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಬಹುತೇಕ ಜನರಿಗೆ ಸ್ಥಳದಲ್ಲಿಯೇ ಪರಿಹಾರ ದೊರೆತು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.

ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಹೊಸಪೇಟೆ ಸಹಾಯಕ ಆಯುಕ್ತರಾದ ಮಹಮ್ಮದ್ ಅಲಿ ಅಕ್ರಮ್‌ ಷಾ, ಹರಪನಹಳ್ಳಿ ಸಹಾಯಕ ಆಯುಕ್ತ ಪ್ರಕಾಶ, ತಹಸೀಲ್ದಾರರಾದ ಅಜಿತ್ ಮೆಹತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಶಿಕ್ಷಕ ಬಸವರಾಜ ಅಕ್ಕಿ ನಿರೂಪಿಸಿದರು. ಬಿಇಒ ಎಂ. ಚನ್ನಬಸಪ್ಪ ವಂದಿಸಿದರು. ಕಮಲಾಪುರ ಪುರಸಭೆಯ ಸದಸ್ಯರು ಮತ್ತಿತರರಿದ್ದರು.