ಮಾದಿಗ ಸಮುದಾಯಕ್ಕೆ ಶೇ.8 ರಷ್ಟು ಮೀಸಲಾತಿ ನೀಡಿ

| Published : Aug 09 2025, 02:03 AM IST

ಸಾರಾಂಶ

ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸ್ವಾಭಿಮಾನಿ ಮಾದಿಗ ಮಹಾಸಭಾದ ಮುಖಂಡ ಮೋಹನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟರಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಒಳ ಮೀಸಲು ಜಾರಿ ಮಾಡುವಾಗ ಈ ಸಮುದಾಯಕ್ಕೆ ಶೇ.6 ರಿಂದ 8 ರಷ್ಟು ಮೀಸಲು ನಿಗಧಿಪಡಿಸಬೇಕೆಂದು ಚಿತ್ರದುರ್ಗ ಜಿಲ್ಲಾ ಸ್ವಾಭಿಮಾನಿ ಮಾದಿಗ ಮಹಾಸಭಾದ ಮುಖಂಡ ಮೋಹನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆ.16 ರಂದು ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ವಿಶೇಷ ಸಂಪುಟ ಸಭೆ ಕರೆದಿದ್ದು, ನಾಗಮಮೋಹನದಾಸ ಅವರ ವರದಿಯನ್ನು ಅಂಗೀಕರಿಸಿ ಅಂದೇ ಒಳ ಮೀಸಲು ಪ್ರಮಾಣ ನಿಗಧಿಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.

ಒಳ ಮೀಸಲಾತಿ ಜಾರಿ ವಿಚಾರವಾಗಿ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿ ಆಗಸ್ಟ್ ಒಂದಕ್ಕೆ ವರ್ಷ ಕಳೆದಿದ್ದರ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಮಾದಿಗ ಮಹಾಸಭಾ ಹಾಗೂ ಇತರೆ ದಲಿತ ಸಮುದಾಯಗಳು ಪ್ರತಿಭಟನೆ ನಡೆಸಿದ ಪರಿಣಾಮ ಒಳ ಮೀಸಲಾತಿ ಜಾರಿ ವಿಚಾರವಾಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ಒಳ ಮೀಸಲಾತಿ ಜಾರಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ನಡೆಸಿದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಒಳ ಮೀಸಲಾತಿ ಜಾರಿ ಮಾಡಲುಸರ್ಕಾರ ಮೀನಾಮೇಷ ಎಣಿಸುತ್ತಿದ್ದು ಕುಂಟು ನೆಪಗಳ ಹುಡುಕುತ್ತಿದೆ ಎಂದು ದೂರದಿರು.

ಒಳ ಮೀಸಲಾತಿ ವಿಚಾರವಾಗಿ ಹಿಂದೆ ರಚನೆಯಾದ ಎಲ್ಲಾ ಆಯೋಗಗಳು ನೀಡಿದ ವರದಿ ಅನ್ವಯ ಮಾದಿಗ ಸಮುದಾಯ ಹೆಚ್ಚಿದೆ.. ಆದ್ದರಿಂದ ಶೇ.6 ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿವೆ. ರಾಜ್ಯದಲ್ಲಿ ಮಾದಿಗ ಸಮುದಾಯ ಹೆಚ್ಚಿರುವುದರಿಂದ ಶೇ. 6 ರಿಂದ 8 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸುತ್ತಿೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳುತ್ತಾರೆ. ಆದರೆ ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ ಹಾಗೂ ನ್ಯಾ.ನಾಗಮೋಹನ್ ದಾಸ್ ಆಯೋಗ ಎಲ್ಲವೂ ಕರ್ನಾಟಕದಲ್ಲಿ ಮಾದಿಗ ಮತ್ತು ಅದರ ಉಪ ಜಾತಿಗಳು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹ ಎಂದು ಸ್ವಷ್ಟವಾಗಿ ಹೇಳಿವೆ. ಎಲ್ಲಾ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ ಶೇ, 6 ರಷ್ಟು ಮೀಸಲಾತಿಯನ್ನು ನಿಗಧಿ ಮಾಡಿವೆ. ಹೀಗಾಗಿ ಸಿದ್ದರಾಮಯ್ಯ ರವರು ಮಾದಿಗ ಪಾಲಿನ ಶೇ.6 ರಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ಪ್ರತ್ಯೇಕವಾಗಿ ಘೋಷಿಸಲಿ ಎಂದು ಒತ್ತಾಯಿಸಿದರು.

ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪರ ಎಂದು ಬಾಯಿಯಲ್ಲಿ ಹೇಳುತ್ತಾರೆ ಹೊರತು ಕಾರ್ಯ ರೂಪದಲ್ಲಿ ಹಿಂದ ಇದ್ದಾರೆ. ಇಲ್ಲಿಯವರೆಗೆ ಒಳ ಮೀಸಲಾತಿ ನಮಗೆ ಮಾಡಲು ಅಧಿಕಾರ ಇಲ್ಲ ಎನ್ನುತ್ತಿದ್ದವರಿಗೆ ನ್ಯಾಯಾಲಯ ಆದೇಶ ಮಾಡಿ ನಿಮಗಿದೆ ಎಂದು ತೋರಿಸಿತ್ತು. ನಂತರದಲ್ಲಿ ಸಿದ್ದರಾಮಯ್ಯ, ಆಯೋಗ ನೇಮಕ ಮಾಡಿ ವರದಿ ಬರಲಿ ಎಂದಿದ್ದರು. ಈಗ ವರದಿ ಬಂದಿದ್ದರೂ ಜಾರಿ ಮಾಡಲು ವಿಳಂಬ ಮಾಡುತ್ತಿರುವ ಉದ್ದೇಶ ಅರ್ಥವಾಗುತ್ತಿಲ್ಲವೆಂದರು. ತಾಪಂ ಮಾಜಿ ಅಧ್ಯಕ್ಷ ಜಯಣ್ಣ, ಪ್ರಹ್ಲಾದ್, ಪರಶುರಾಮ್, ನಾಗರಾಜ್ ಸಿದ್ಧಾರ್ಥ ಸುದ್ದಿಗೋಷ್ಠಿಯಲ್ಲಿದ್ದರು.