ಕೊಪ್ಪಳ: ಜೂ. 28 ರಿಂದ ಜು.1ರ ವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ 5 ವರ್ಷದೊಳಗಿನ ಎಲ್ಲ್ಲ ಮಕ್ಕಳಿಗೂ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಕುರಿತು ಜರುಗಿದ 2ನೇ ಸುತ್ತಿನ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿಲ್ಲವಾದರೂ ನಾವು ಮೈಮರೆಯುವಂತಿಲ್ಲ. ಪೋಲಿಯೋ ನಿರ್ಮೂಲನೆ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಪಲ್ಸ್ ಪೋಲಿಯೋ ಲಸಿಕೆಯಿಂದ ಯಾವುದೇ ಅರ್ಹ ಮಗು ವಂಚಿತವಾಗಬಾರದು. ಈ ಹಿನ್ನೆಲೆ ಜಿಲ್ಲೆಯಲ್ಲಿ ಜೂ.28 ರಿಂದ ಜು.1ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಬೇಕು.ಇದಕ್ಕಾಗಿ ವಿವಿಧ ಇಲಾಖೆಗಳ ಸಹಕಾರ ತೆಗೆದುಕೊಂಡು ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪೋಲಿಯೊ ಲಸಿಕೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ತಮಗೆ ವಹಿಸಲಾದ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎನ್.ಜಿ.ಓ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ತೆಗೆದುಕೊಂಡು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು 100ಕ್ಕೆ 100ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಲಿಂಗರಾಜು ಟಿ., ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗೋನಾಳ ಕುಮಾರಸ್ವಾಮಿ, ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಜಿ ಕುಲಕರ್ಣಿ,ಇನ್ನರ್ ವೀಲ್ ಕ್ಲಬ್ ಡಾ. ರಾಧಾ ಕುಲಕರ್ಣಿ ಸೇರಿದಂತೆ ಇತರೆ ವೈದ್ಯಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿ,ತಾಲೂಕು ಆರೋಗ್ಯಾಧಿಕಾರಿ, ಎನ್.ಜಿ.ಓ.ಗಳ ಪ್ರತಿನಿಧಿಗಳಿದ್ದರು.