ಸಾರಾಂಶ
ಹುಬ್ಬಳ್ಳಿ:
ಮುಂದಿನ ಪೀಳಿಗೆ ಹಿತದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುವ ಕಾರ್ಯವಾಗಲಿ. ಮುಂದಿನ ದಿನಗಳಲ್ಲಿ ಸಮಾಜದ ಅಡಿ ವಿದ್ಯಾಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸುವ ಕಾರ್ಯವಾಗಲಿ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಹೇಳಿದರು.ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಸಮಾಜ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಹೀಗಾಗಿ, ಬಂಟರ ಸಮುದಾಯ ಬೆಂಗಳೂರಿನ ಶಾಲೆ-ಕಾಲೇಜು ಸ್ಥಾಪನೆ ಕಾರ್ಯ ಮಾಡುತ್ತಿದೆ. ಅಲ್ಲದೇ, ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗೆ ಸಮಾಜದ ಮಕ್ಕಳು ಹೋಗಬೇಕಿದೆ. ಈ ನಿಟ್ಟಿನಲ್ಲಿ ಸಂಘ ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ತಯಾರಿದೆ. ಇದರ ಲಾಭ ಪಡೆದು ಸಮಾಜದ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಬೇಕು ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಶ್ರಮಜೀವಿಯಾಗಿರುವ ಬಂಟರ ಸಮುದಾಯವು, ಎಲ್ಲ ಸಮುದಾಯದವರನ್ನು ಪ್ರೀತಿ, ಸೌಹಾರ್ದದಿಂದ ಕಾಣುವ ಮೂಲಕ ಒಂದೇ ಕುಟುಂಬದಂತೆ ಕೊಂಡೊಯ್ಯುತ್ತಿದೆ. ಹೋಟೆಲ್ ಉದ್ಯಮದಲ್ಲಿ ದೇಶ, ವಿದೇಶದಲ್ಲಿ ತನ್ನದೇಯಾದ ಛಾಪು ಹೊಂದಿದ್ದು, ಕಟ್ಟಕಡೆಯ ವ್ಯಕ್ತಿಗೂ ಸಹಾಯಹಸ್ತ ಚಾಚುವ ಗುಣವನ್ನು ಸಮುದಾಯ ಹೊಂದಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಂಧುಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಸಂಘ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದರು.
ಎಸ್.ಬಿ. ಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್, ಎಂಬಿಬಿಎಸ್ ಸೇರಿದಂತೆ ಒಟ್ಟು 132 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ನಂತರ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹು-ಧಾ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಉಪಾಧ್ಯಕ್ಷ ಕೆ. ಸುರೇಶ ಶೆಟ್ಟಿ, ರಾಜೇಂದ್ರ ವಿ.ಶೆಟ್ಟಿ, ಕಾರ್ಯದರ್ಶಿ ಪ್ರದೀಪ ಪಕ್ಕಳ, ಖಜಾಂಚಿ ಹರ್ಷಕುಮಾರ ಶೆಟ್ಟಿ, ರತ್ನಾಕರ ಎಂ. ಶೆಟ್ಟಿ, ಸುಚೇಂದ್ರ ಶೆಟ್ಟಿ, ದಿನೇಶ ಶೆಟ್ಟಿ, ಅಭೀಶ ಶೆಟ್ಟಿ, ಹೇಮಾ ಶೆಟ್ಟಿ, ರಾಕಾ ಶೆಟ್ಟಿ, ದೀಪಕ ಶೆಟ್ಟಿ ಸೇರಿದಂತೆ ಹಲವರಿದ್ದರು.