ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಶಾಸಕ ರಾಜಾ ವೇಣುಗೋಪಾಲ ನಾಯಕ

| Published : Oct 02 2024, 01:09 AM IST

ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಶಾಸಕ ರಾಜಾ ವೇಣುಗೋಪಾಲ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಕ್ರೀಡಾಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು, ಸಮಯ ವ್ಯರ್ಥ ಮಾಡದೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ 14 ರಿಂದ17ರ ವಯೋಮಿತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮತಕ್ಷೇತ್ರ ವ್ಯಾಪ್ತಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ಒದಗಿಸಿ ಕೊಡುವ ಮೂಲಕ ಕ್ರೀಡೆಯನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಒಯ್ಯಲಾಗುವುದು ಎಂದರು.

ಕ್ರೀಡಾಕೂಟದಲ್ಲಿ ಎಲ್ಲ ಮಕ್ಕಳು ಒಂದೇ. ತೀರ್ಪುಗಾರರು ನ್ಯಾಯಸಮ್ಮತ ತೀರ್ಪು ನೀಡಬೇಕು. ಯಾವುದೇ ತಾರತಮ್ಯ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಂತರ ಪರಿಶ್ರಮದಿಂದ ಏನನ್ನಾದರೂ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ, ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಸದೃಢ ಆರೋಗ್ಯ ಮತ್ತು ಮನೋಬಲ ವರ್ಧನೆಯಾಗುತ್ತದೆ ಎಂದರು. ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಂಜೀವ್ ದರಬಾರಿ ಮಾತನಾಡಿದರು.

ಲಕ್ಷ್ಮಣ ಬಿರಾದಾರ್ ಮತ್ತು ಭೀಮರಾಯ ಗೋನಾಲ ನಿರೂಪಿಸಿದರು. ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ್ ಸ್ವಾಗತಿಸಿದರು. ಸಿದ್ದು ಅಮ್ಮಾಪುರ ವಂದಿಸಿದರು. ಈ ಕ್ರೀಡಾಕೂಟದಲ್ಲಿ ತಾಲೂಕಿನ ಏಳು ವಲಯಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಶಿಕ್ಷಕರಾದ ರಾಜ್‌ಅಹ್ಮದ್ ಪಥ ಸಂಚಲನ ಮುನ್ನೆಡೆಸಿದರು.

ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಮುಖಂಡರಾದ ರಾಜಾ ವಾಸುದೇವ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ, ದೊಡ್ಡ ದೇಸಾಯಿ ದೇವರಗೋನಾಲ, ಪಿಎಸ್‌ಐ ಶಿವರಾಜ್ ಪಾಟೀಲ್, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ್, ಬಿಆರ್‌ಪಿ ಖಾದರ್ ಪಟೇಲ, ಗೋಪಾಲ ನಾಯಕ ಜಹಾಗೀರದಾರ್, ಶರಣಗೌಡ ಗೋನಾಲ, ಮಹೇಶ ಜಹಾಗೀರದಾರ್ ಸೇರಿದಂತೆ ಇತರರಿದ್ದರು.