ಪಠ್ಯೇತರಕ್ಕೂ ಆದ್ಯತೆ ನೀಡಿ

| Published : Dec 17 2023, 01:45 AM IST

ಸಾರಾಂಶ

ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ,ಎನ್‌ಎಸ್ಎಸ್, ಸ್ಕೌಟ್ ಅಂಡ್ ಗೈಡ್ ಮುಂತಾದವುಗಳಲ್ಲಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿದ್ಯಾರ್ಥಿಗಳು ಯಾವೂದೇ ಪರೀಕ್ಷೆಗಳಾಗಿರಲಿ ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಜೊತೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬಸವನಬಾಗೇವಾಡಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಹೇಳಿದರು.

ಪಟ್ಟಣದ ಎಂಜಿವಿಸಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಟಿವಿ ಮೊಬೈಲ್‌ ಗೀಳಿನಿಂದ ಹೊರಬಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡಿ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ. ಇದೇ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಾನು ಏನಾದರೂ ಸಾಧಿಸಿದ್ದೆನೆಂದರೆ ಅದು ಈ ಮಹಾವಿದ್ಯಾಲಯದ ಗುರುಗಳ ಕೃಪಾಶೀರ್ವಾದ. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸಂಸ್ಥೆಯ ಕಾರ್ಯದರ್ಶಿ ಅಶೋಕ ತಡಸದ ಅವರು ಮಾತನಾಡಿ ಮಹಾತಾಯಿ ಗಂಗಮ್ಮನವರ ಕೃಪೆಯಿಂದ ಈ ಸಂಸ್ಥೆ ಪ್ರಾರಂಭವಾಗಿ ಗ್ರಾಮೀಣ ಜನರ ವಿದ್ಯಾದಾನಕ್ಕೆ ವರವಾಗಿದೆ. ಈ ಸಂಸ್ಥೆಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು, ಸಾಹಿತಿಗಳಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ, ಸಂಶೋಧಕರಾಗಿದ್ದಾರೆ, ರಾಜಕಾರಣಿಗಳಾಗಿ ಹೆಸರುವಾಸಿಯಾಗಿದ್ದಾರೆ. ಸಂಸ್ಥೆ ಆಡಳಿತಾಧಿಕಾರಿಗಳಾದ ಪ್ರೊ. ಎ ಬಿ ಕುಲಕರ್ಣಿ ಅವರು ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ,ಎನ್‌ಎಸ್ಎಸ್, ಸ್ಕೌಟ್ ಅಂಡ್ ಗೈಡ್ ಮುಂತಾದವುಗಳಲ್ಲಿ ಭಾಗವಹಿಸಬೇಕು. ಮಹಾವಿದ್ಯಾಲಯದಲ್ಲಿ ಗ್ರಂಥಾಲಯ, ಪ್ರಯೋಗಾಲಯ ಹಾಗೂ ನುರಿತ ಸಿಬ್ಬಂದಿ ವರ್ಗದವರಿದ್ದಾರೆ ಅವರ ಮಾರ್ಗದರ್ಶನ ಪಡೆಯಬೇಕು ಎಂದು ಹಲವಾರು ದೃಷ್ಟಾಂತಗಳನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಸ್ ಎನ್ ಪೋಲೇಸಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳಿವೆ ಅಂತಹ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ವೇದಿಕೆ ಸೂಕ್ತ ವೇದಿಕೆಯಾಗಿದ್ದು ಅದರ ಸಹಾಯದಿಂದ ತಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು. ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಗಳಾದ ಡಾ. ಪ್ರಕಾಶ ನರಗುಂದ ಅವರು ನೆರವೇರಿಸಿದರು. ಕುಮಾರ ಆನಂದ್ ಚಿಕ್ಕೂರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.