ಸಾರಾಂಶ
ಸದ್ಯದ ಪರಿಸ್ಥಿತಿಯಲ್ಲಿ ಕೃಷಿಗೆ ನೀರಿನ ತೊಂದರೆ ಇಲ್ಲ. ಬೇಸಿಗೆ ಬೆಳೆಗೆ ಬೇಕಿರುವ ನೀರಿನ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸೋಣ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ- ಕಟ್ಟೆಗಳನ್ನು ತುಂಬಿಸಲು ಆದ್ಯತೆ ನೀಡಿ. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಉಪಯುಕ್ತವಾಗಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.ಸೋಮವಾರ ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಮಾತನಾಡಿ, ಇದು ಉತ್ತಮ ಸಮಯ. ತಾಲೂಕುಗಳ ಕೊನೆಯ ಭಾಗದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು. ಜಲಾಶಯ ತುಂಬಿದ್ದು, ರೈತರು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳಿಂದ ಕೃಷಿಗೆ ನೀರು ಸಿಗುತ್ತಿಲ್ಲ ಎಂಬ ದೂರು ಬಾರದಂತೆ ನೋಡಿಕೊಂಡು ಎಚ್ಚರಿಕೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕೆರೆಗಳ ಹೂಳು ತೆಗೆಯುವ ಕೆಲಸ ಹಾಗೂ ಕೆರೆಗಳ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅನುದಾನ ಪಡೆದು ಕೆರೆಗಳ ನಿರ್ವಹಣೆ ಕಾಮಗಾರಿಗಳನ್ನು ನಡೆಸಬೇಕು. ರೈತರ ಪರವಾಗಿ ಸದಾ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಮುಂಗಾರು ಬೆಳೆಗೆ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಒದಗಿಸುವಂತೆ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ. ಕೃಷಿ ಚಟುವಟಿಕೆಗಳು ಚುರುಕಾಗಿದ್ದು, ರೈತರಿಗೆ ಬೇಕಿರುವ ಮಾಹಿತಿಯನ್ನು ಒದಗಿಸುವಂತೆ ಹೇಳಿದರು.ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕೃಷಿಗೆ ನೀರಿನ ತೊಂದರೆ ಇಲ್ಲ. ಬೇಸಿಗೆ ಬೆಳೆಗೆ ಬೇಕಿರುವ ನೀರಿನ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸೋಣ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಅಣೆಕಟ್ಟೆಯಲ್ಲಿ ಕಳೆದ ೧೦ ವರ್ಷಗಳಲ್ಲಿದ್ದ ನೀರಿನ ಪ್ರಮಾಣ ಹಾಗೂ ನೀರು ಹರಿಸಿದ ವಿವರಗಳನ್ನು ಸಭೆಗೆ ವಿವರಿಸಿದರು.ಈ ಬಾರಿ ವರುಣಾ ನಾಲಾ ವ್ಯಾಪ್ತಿಯ ೭೫೦೦ ಎಕರೆ ಭೂಮಿಗೆ ವ್ಯವಸಾಯಕ್ಕಾಗಿ ನೀರು ಕೊಡುತ್ತೇವೆ. ಮುಂದಿನ ಹತ್ತು ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆ- ಕಟ್ಟೆಗಳನ್ನು ತುಂಬಿಸುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ಮಧು.ಜಿ.ಮಾದೇಗೌಡ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.