ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ ಕೊಡಿ

| Published : Feb 14 2025, 12:33 AM IST

ಸಾರಾಂಶ

ಎಲ್ಲ ಪ್ರೌಢಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

ಹೂವಿನಹಡಗಲಿ: ತಾಲೂಕಿನ ಸರ್ಕಾರಿ ಅನುದಾನಿತ, ಅನುದಾನ ರಹಿತ, ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸೂಕ್ತ ಮಾರ್ಗದರ್ಶನದ ಜತೆಗೆ ಆದ್ಯತೆ ನೀಡಬೇಕು ಎಂದು ತಹಸೀಲ್ದಾರ್‌ ಜಿ. ಸಂತೋಷ್ ಕುಮಾರ್ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಶಾಲಾ ಶಿಕ್ಷಣ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಎಲ್ಲ ಪ್ರೌಢಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳನ್ನು ಗಳಿಸುವ ಸುಲಭ ತಂತ್ರಗಳನ್ನು ಕಲಿಸಬೇಕು ಎಂದು ತಿಳಿಸಿದರು.

ಕಳೆದ ಬಾರಿಗಿಂತ ಈ ವರ್ಷ ಉತ್ತಮ ಫಲಿತಾಂಶ ಪಡೆಯಲು ಮುಖ್ಯ ಗುರುಗಳು, ಸಹ ಶಿಕ್ಷಕರು ಪರಿಶ್ರಮ ವಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಮಾತನಾಡಿ, ಎಲ್ಲ ವಿಷಯಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಪರೀಕ್ಷಾ ಪ್ಯಾಕೇಜ್ ತಾಲೂಕಿನ 49 ಪ್ರೌಢಶಾಲೆಗಳಿಗೆ ವಿತರಿಸಿದೆ. ಬೆಳಗ್ಗೆ ವಿಶೇಷ ತರಗತಿ ಸಂಜೆ ಗುಂಪು ಅಧ್ಯಯನ ಅಲ್ಲದೆ ಭಾನುವಾರವೂ ವಿಶೇಷವಾಗಿ ತರಗತಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾ ಮಟ್ಟದ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆದಿವೆ. ಫೆ. 25ರಿಂದ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗಲಿದೆ ಎಂದರು.

ಸಿಡಿಪಿಒ ರಾಮನಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್. ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.