ಯುವ ಜನರು ಕನ್ನಡ ಭಾಷೆಯ ಮಹತ್ವ ಅರಿತು, ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಭಾಷೆಯ ಮೇಲಿನ ಅಭಿಮಾನ ಕೇವಲ ಮಾತಿಗೆ ಸೀಮಿತವಾಗದೆ, ಅದರ ಬಳಕೆ ಹಾಗೂ ಬೆಳವಣಿಗೆಯ ಮೂಲಕ ವ್ಯಕ್ತವಾಗಬೇಕೆಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಯುವ ಜನರು ಕನ್ನಡ ಭಾಷೆಯ ಮಹತ್ವ ಅರಿತು, ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಭಾಷೆಯ ಮೇಲಿನ ಅಭಿಮಾನ ಕೇವಲ ಮಾತಿಗೆ ಸೀಮಿತವಾಗದೆ, ಅದರ ಬಳಕೆ ಹಾಗೂ ಬೆಳವಣಿಗೆಯ ಮೂಲಕ ವ್ಯಕ್ತವಾಗಬೇಕೆಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ನುಡಿದರು.

ನಗರದ ಆದರ್ಶ ಐಟಿಐ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಗೌರವ ಹೊಂದುವುದು ಬಹಳ ಮುಖ್ಯ ಎಂದು ತಿಳಿಸಿದರು.

ಸಾಹಿತಿ ಆತ್ಮಾನಂದ ಬಂಬುಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಜಾಗೃತಿ ಎನ್ನುವುದು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿ ಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಹಾಗೂ ಗೌರವ ಬೆಳೆಸುವ ನಿರಂತರ ಪ್ರಯತ್ನ ನಡೆಯಬೇಕು. ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.

ಸಾಹಿತಿ ಮಲ್ಲಿಕಾರ್ಜುನ ಮುರ್ಕೆ ವಿಶೇಷ ಉಪನ್ಯಾಸ ನೀಡಿ, ಕನ್ನಡ ಭಾಷೆಯ ಇತಿಹಾಸ, ಸಾಹಿತ್ಯದ ಶ್ರೀಮಂತಿಕೆ ಹಾಗೂ ಕನ್ನಡಿಗರ ಸಾಂಸ್ಕೃತಿಕ ಪರಂಪರೆ ಯ ಕುರಿತು ವಿವರಿಸಿದರು. ಗ್ರೇಡ್-1 ಅನುದಾನಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭೀಮಶಾ ಬಸಲಾಪೂರ ಪಾಲ್ಗೊಂಡಿದ್ದರು.

ಹಿರಿಯ ಕಲಾವಿದೆ ಲಕ್ಷ್ಮೀ ಚಿದ್ರಿ ಅವರು ಜಾನಪದ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಿದರು. ಕಾಂಚನಾ ಅವರು ದೇಶಭಕ್ತಿ ಗೀತೆ, ಪದ್ಮಾವತಿ ಪಾಂಚಾಳ್ ಮೊಹರಂ ಪದ, ಸಂತೋಷಕುಮಾರ್ ಹಂತಿ ಪದ, ಲಕ್ಷ್ಮೀಬಾಯಿ ಬುರುಸೊಟ್ಟೆ ಜಾನಪದ ಗೀತೆ ಪ್ರಸ್ತುತಪಡಿಸಿದರು.

ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಕುಮಾರ ಜೋಳದಾಪಕೆ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ವಿಜಯಕುಮಾರ ಬ್ಯಾಲಹಳ್ಳಿ ನಿರೂಪಿಸಿದರೆ. ಶಿಕ್ಷಕಿ ಸುಜಾತಾ ವಂದಿಸಿದರು.