ರಾಜ್ಯ ಬಜೆಟ್‌ನಲ್ಲಿ ಮಾವು, ರೇಷ್ಮೆಗೆ ಆದ್ಯತೆ ನೀಡಲಿ : ಸಂಸದ ಡಾ.ಸಿ.ಎನ್ .ಮಂಜುನಾಥ್ ಸಲಹೆ

| N/A | Published : Feb 28 2025, 12:52 AM IST / Updated: Feb 28 2025, 12:23 PM IST

ರಾಜ್ಯ ಬಜೆಟ್‌ನಲ್ಲಿ ಮಾವು, ರೇಷ್ಮೆಗೆ ಆದ್ಯತೆ ನೀಡಲಿ : ಸಂಸದ ಡಾ.ಸಿ.ಎನ್ .ಮಂಜುನಾಥ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

  ಜಿಲ್ಲೆಯಲ್ಲಿ ಹೆಚ್ಚಿನ ರೈತರು ಮಾವು ಮತ್ತು ರೇಷ್ಮೆ ಬೆಳೆಯನ್ನು ಅವಲಂಬಿಸಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಈ ಎರಡು ಬೆಳೆಗಳಿಗೂ ಆದ್ಯತೆ ನೀಡಿ ಬೆಳೆಗಾರರ ರಕ್ಷಣೆ ಮಾಡಬೇಕು ಎಂದು ಸಂಸದ ಡಾ.ಸಿ.ಎನ್ .ಮಂಜುನಾಥ್ ಸಲಹೆ ನೀಡಿದರು.

ರಾಮನಗರ : ಜಿಲ್ಲೆಯಲ್ಲಿ ಹೆಚ್ಚಿನ ರೈತರು ಮಾವು ಮತ್ತು ರೇಷ್ಮೆ ಬೆಳೆಯನ್ನು ಅವಲಂಬಿಸಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಈ ಎರಡು ಬೆಳೆಗಳಿಗೂ ಆದ್ಯತೆ ನೀಡಿ ಬೆಳೆಗಾರರ ರಕ್ಷಣೆ ಮಾಡಬೇಕು ಎಂದು ಸಂಸದ ಡಾ.ಸಿ.ಎನ್ .ಮಂಜುನಾಥ್ ಸಲಹೆ ನೀಡಿದರು.

ತಾಲೂಕಿನ ಕೂಟಗಲ್ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಆಗಿರುವ ಕಾರಣ ಮಾವು ಮತ್ತು ರೇಷ್ಮೆ ಸೇರಿದಂತೆ ಜಿಲ್ಲೆ ಅಭಿವೃದ್ಧಿಗೆ ಪೂರಕ ಯೋಜನೆಗಳು ಘೋಷಣೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಸಿಲ್ಕ್ ವೇಸ್ಟ್‌ನಿಂದಲೂ ಹಲವು ಉಪಯುಕ್ತ ವಸ್ತುಗಳನ್ನ ತಯಾರಿಸಬಹುದು. ಚೀನಾ ಇದನ್ನು ಕಡಿಮೆ ದರಕ್ಕೆ ಖರೀದಿ‌ ಮಾಡಿ ಬಳಿಕ ಅದನ್ನು ಸಂಸ್ಕರಣೆ ಮಾಡಿ ಮತ್ತೆ ಅಧಿಕ ದರಕ್ಕೆ ನಮಗೆ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಈ ರೇಷ್ಮೆ ತ್ಯಾಜ್ಯ ಸ್ಪನ್ ಮಿಲ್ಸ್ ಘಟಕವನ್ನು ಸರ್ಕಾರವೇ ಸ್ಥಾಪನೆ ಮಾಡಬೇಕು. ಇದರಿಂದ ಹೆಚ್ಚು ಅದಾಯವೂ ಸಿಗುತ್ತದೆ, ರೈತರಿಗೂ ಉಪಯೋಗ ಆಗುತ್ತದೆ. ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡುವ ಜೊತೆಗೆ ಬಸ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಜೆಟ್ ಇರಲಿ ಎಂದು ಮಂಜುನಾಥ್ ಹೇಳಿದರು.

ಇದಾದ ಬಳಿಕ ಆನುಮಾನಹಳ್ಳಿ ಮೊರಾಜಿ ದೇಸಾಯಿ ಶಾಲೆಗೆ ದಿಢೀರ್ ಭೇಟಿ ನೀಡಿದ ಸಂಸದರು, ಮಕ್ಕಳನ್ನು ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಮಾಹಿತಿ ಪಡೆದು ಆತ್ಮವಿಶ್ವಾಸ ತುಂಬಿ ಶಾಲೆಯ ಹಾಗೂ ಮೂಲ ಸೌಕರ್ಯಗಳ ಮಾಹಿತಿ ಪಡೆದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಎದುರಿಸಬೇಕು. ಪರೀಕ್ಷೆ ಸಮೀಪದಲ್ಲಿರುವ ಕಾರಣ ಸಮಯ ವ್ಯರ್ಥ ಮಾಡದೆ ಪಠ್ಯಗಳನ್ನು ಮನನ ಮಾಡಿಕೊಂಡು ಸಜ್ಜಾಗಬೇಕು. ಏನೇ ಸಮಸ್ಯೆಗಳಿದ್ದರು ಪೋಷಕರು ಮತ್ತು ಶಿಕ್ಷಕರ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಮಂಜುನಾಥ್ ಸಲಹೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆ ಕೂತು ಮುದ್ದೆ, ಸಾಂಬರ್ ಸವಿದರು.

ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ:

ಇದಾದ ತರುವಾಯ ಕಣ್ವ ಗ್ರಾಮದಲ್ಲಿ ಕಣ್ವ ಮಹರ್ಷಿ ಅವರ ಸ್ಮರಣಾರ್ಥ ಲೋಕಸಭಾ ಸಂಸದರ ಕ್ಷೇತ್ರಾಭಿವೃದ್ಧಿ ಯೋಜನೆಯಡಿಯಲ್ಲಿ ಸಮುದಾಯ ಭವನ, ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಸದರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದಿಶಾ ಸದಸ್ಯರಾದ ನರಸಿಂಹಮೂರ್ತಿ, ಶಿವಣ್ಣ ಮತ್ತಿತರರು ಹಾಜರಿದ್ದರು. 27ಕೆಆರ್ ಎಂಎನ್ 3,4.ಜೆಪಿಜಿ

3.ರಾಮನಗರ ತಾಲೂಕು ಕೂಟಗಲ್ ಹೋಬಳಿ ಆನುಮಾನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆ ಮಕ್ಕಳೊಂದಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಚರ್ಚೆ ನಡೆಸಿದರು.

4. ರಾಮನಗರ ತಾಲೂಕು ಕೂಟಗಲ್ ಹೋಬಳಿ ಆನುಮಾನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆ ಮಕ್ಕಳೊಂದಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಭೋಜನ ಸೇವಿಸಿದರು.