ಸಾರಾಂಶ
ನರೇಗಾದಲ್ಲಿ 260ಕ್ಕೂ ಅಧಿಕ ವಿವಿಧ ಕಾಮಗಾರಿಗಳಿದ್ದು, ಗ್ರಾಪಂ ಪಿಡಿಒ ಅವರು ಕೇವಲ ಕಾಲುವೆ, ಕೆರೆಯಂತಹ ಕಾಮಗಾರಿಗಳಿಗೆ ಸೀಮಿತವಾಗದೇ ಬೇರೆ ಬೇರೆ ಕಾಮಗಾರಿಗಳನ್ನ ಕೈಗೊಂಡು ಮಾನವ ದಿನ ಸೃಜನೆಯ ಪ್ರಗತಿ ಸಾಧಿಸಬೇಕು.
ಕಾರವಾರ: ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಹಾಗೂ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಡಿ ಕೈಗೊಳ್ಳುವ ಕಟ್ಟಡ ಕಾಮಗಾರಿಗಳ ಪೈಕಿ, ನರೇಗಾ ಅನುದಾನದ ಕೆಲಸ ಕಾರ್ಯಗಳನ್ನು ಪ್ರಾರಂಭದಲ್ಲೇ ಕೈಗೆತ್ತಿಕೊಂಡು ಮುಗಿಸಬೇಕು. ಬೇರೆ ಅನುದಾನ ಮೊದಲಿಗೆ ಬಳಸಿ ನಂತರ ನರೇಗಾ ಕೆಲಸ ಬಾಕಿಯಿಟ್ಟು ಕಾಮಗಾರಿ ಪೂರ್ಣಗೊಳಿಸುವುದರಲ್ಲಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಆರ್‌ಇಡಿ ಮತ್ತು ಆರ್‌ಡಬ್ಲ್ಯುಎಸ್, ತಾಪಂನ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ಕಡಿಮೆ ಪ್ರಗತಿ ಸಾಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಾಗದೇ ಖಾಲಿಯಿರುವ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ನೀಡಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ ಕಡಿಮೆಗೊಳಿಸಬೇಕು. ಪ್ರತಿಯೊಬ್ಬರೂ ನಿಗದಿತ ಗುರಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದರು. ತಾಲೂಕು ಭೇಟಿ ವೇಳೆ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ, ಕಾರ್ಯಕರ್ತೆಯರು ಹಾಗೂ ಸಹಾಯಕರ ಅಲಭ್ಯತೆ ಕಂಡುಬರುತ್ತಿದೆ. ಹೀಗಾಗಿ ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಕಾರ್ಯ ಕೈಗೊಂಡು ಜಿಲ್ಲಾಪಂಚಾಯಿತಿಗೆ ವರದಿ ಸಲ್ಲಿಸಬೇಕು ಎಂದರು.ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯ ಸಮರ್ಪಕ ಅನುಷ್ಠಾನ ಹಾಗೂ ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಎಲ್ಲ ಎಇಇ ಅವರು ತಮ್ಮ ವ್ಯಾಪ್ತಿಯಲ್ಲಿನ ಗುತ್ತಿಗೆದಾರ ಕಂಪನಿಗಳಿಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.ನರೇಗಾದಲ್ಲಿ 260ಕ್ಕೂ ಅಧಿಕ ವಿವಿಧ ಕಾಮಗಾರಿಗಳಿದ್ದು, ಗ್ರಾಪಂ ಪಿಡಿಒ ಅವರು ಕೇವಲ ಕಾಲುವೆ, ಕೆರೆಯಂತಹ ಕಾಮಗಾರಿಗಳಿಗೆ ಸೀಮಿತವಾಗದೇ ಬೇರೆ ಬೇರೆ ಕಾಮಗಾರಿಗಳನ್ನ ಕೈಗೊಂಡು ಮಾನವ ದಿನ ಸೃಜನೆಯ ಪ್ರಗತಿ ಸಾಧಿಸಬೇಕು ಎಂದರು.
ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಅಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ ಕರೀಂ ಅಸಾದಿ ಮತ್ತಿತರರು ಇದ್ದರು.