ಉಚ್ಚಂಗಿದುರ್ಗದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ: ಟಿ.ವಿ. ಪ್ರಕಾಶ

| Published : Feb 09 2024, 01:45 AM IST

ಉಚ್ಚಂಗಿದುರ್ಗದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ: ಟಿ.ವಿ. ಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷಾಂತರ ಭಕ್ತರು ಸೇರುವುದರಿಂದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಬೀದಿದೀಪ, ಆ್ಯಂಬುಲೆನ್ಸ್, ಅಗ್ನಿಶಾಮಕ, ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಕಲ್ಪಿಸುವಂತೆ ಎಸಿ ಟಿ.ವಿ. ಪ್ರಕಾಶ ತಿಳಿಸಿದರು.

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಉಚ್ಚೆಂಗೆಮ್ಮ ದೇವಾಲಯದಲ್ಲಿ ಫೆ. 22ರಿಂದ 25ರ ವರೆಗೆ ನಾಲ್ಕು ದಿನಗಳ ಕಾಲ ಜರುಗುವ ಭರತ ಹುಣ್ಣಿಮೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಅವರಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಇಲ್ಲಿಯ ಕಂದಾಯ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಉಚ್ಚಂಗಿದುರ್ಗದಲ್ಲಿ ಭರತ ಹುಣ್ಣಿಮೆ ಹಾಗೂ ಯುಗಾದಿ ಜಾತ್ರೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭರತ ಹುಣ್ಣಿಮೆಯಲ್ಲಿ ಮೂಢನಂಬಿಕೆ, ದೇವದಾಸಿ, ಮುತ್ತು ಕಟ್ಟುವ ಪದ್ಧತಿಗಳು ಹಲವು ವರ್ಷಗಳಿಂದ ಸಂಪೂರ್ಣವಾಗಿ ನಿಷೇಧಗೊಂಡಿದೆ.

ಆದರೂ ಘಟನೆಗಳು ನಡೆಯದಂತೆ ಸಿಸಿ ಟಿವಿ ಅಳವಡಿಸಬೇಕು. ಲಕ್ಷಾಂತರ ಭಕ್ತರು ಸೇರುವುದರಿಂದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಬೀದಿದೀಪ, ಆ್ಯಂಬುಲೆನ್ಸ್, ಅಗ್ನಿಶಾಮಕ, ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಕಲ್ಪಿಸುವಂತೆ ತಿಳಿಸಿದರು. ಭಕ್ತರಿಗೆ ನೀರಿನ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಚ್. ಗಂಗಾಧರ, ತಹಸೀಲ್ದಾರ್ ಗಿರೀಶ್ ಬಾಬು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ಪ್ರಕಾಶ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಉಮೇಶ್ ನಾಯ್ಕ್, ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಪಿಎಸ್ಐ ಕೆ. ರಂಗಯ್ಯ, ಸಮಿತಿ ಅಧ್ಯಕ್ಷ ಕಟಿಗಿ ಪರಶುರಾಮಪ್ಪ, ಪಿಡಿಒ ಪರಮೇಶ್ವರಪ್ಪ, ಕೆಎಸ್ಆರ್‌ಟಿಸಿ ಅಧಿಕಾರಿಗಳಾದ ವೆಂಕಟೇಶ್, ಫಕ್ರುದ್ದೀನ್, ಮಂಜುಳಾ, ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.