ಗುಣಮಟ್ಟದ ಆಹಾರ ಮಾರಾಟಕ್ಕೆ ಆದ್ಯತೆ ನೀಡಿ: ನ್ಯಾ.ಶಾರದಾದೇವಿ ಹಟ್ಟಿ

| Published : Mar 25 2024, 12:53 AM IST

ಸಾರಾಂಶ

ಬೀದಿಬದಿ ವ್ಯಾಪಾರಿಗಳು ಹಣ ಮಾಡಲಿಕ್ಕಾಗಿ, ಹಣ ಉಳಿಸೋದಕ್ಕಾಗಿ ಅಶುದ್ಧ, ದುರ್ವಾಸನೆ ವಾತಾವರಣದಲ್ಲೇ ಆಹಾರ ಮಾರಾಟ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಮಲೇಬೆನ್ನೂರಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಬೀದಿಬದಿ ವ್ಯಾಪಾರಿಗಳು ಹಣ ಮಾಡಲಿಕ್ಕಾಗಿ, ಹಣ ಉಳಿಸೋದಕ್ಕಾಗಿ ಅಶುದ್ಧ, ದುರ್ವಾಸನೆ ವಾತಾವರಣದಲ್ಲೇ ಆಹಾರ ಮಾರಾಟ ಮಾಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಎಚ್ಚರಿಸಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಪುರಸಭೆ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳು ಹಾಗೂ ಆಹಾರ ಉತ್ಪಾದನಾ ತಯಾರಿಕಾ ಮತ್ತು ಮಾರಾಟಗಾರರಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗಾಗಿ ಶುದ್ಧ ಆಹಾರ, ಶುದ್ಧ ನೀರು ಮಾರಾಟ ಅಗತ್ಯವಿದೆ. ಬೀದಿಬದಿ ವ್ಯಾಪಾರಿಗಳು ಆಶುದ್ಧ ನೀರು, ಕೆಟ್ಟ ವಾತಾವರಣದಲ್ಲಿ ಆಹಾರವನ್ನು ಮಾರಾಟ ಮಾಡದೇ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್ ಮಾತನಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಆಹಾರ ವಸ್ತುಗಳ ತಯಾರಕರು, ಚಿಲ್ಲರೆ ವ್ಯಾಪಾರಿಗಳು ನೋಂದಣಿ ಕಾಯ್ದೆ- ೨೦೧೧ರ ಪ್ರಕಾರ ರಸ್ತೆ ಬದಿ, ಆಹಾರ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಡಾಬಾಗಳು, ಟೀ ಅಂಗಡಿಗಳು, ಹಣ್ಣು, ತರಕಾರಿ ಮಾರಾಟಗಾರರು ನೋಂದಣಿ ಮಾಡಿಸಿರಬೇಕು. ನವೀಕರಣ ಮಾಡಬೇಕು. ಅನುಮತಿ ಪಡೆದಿರಬೇಕು ಹಾಗೂ ಕೇಂದ್ರದ ಪರವಾನಗಿ ಪಡೆದಿರಬೇಕು. ಇಲ್ಲವಾದಲ್ಲಿ ೬ ತಿಂಗಳವರೆಗೆ ಸೆರವಾಸ, ₹೫ ಲಕ್ಷವರೆಗೆ ದಂಡ ವಿಧಿಸಬಹುದು ಎಂದು ಮಾಹಿತಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಪಟ್ಟಣ ವಾರ್ಡ್ ೧೯ರಲ್ಲಿ ಪ್ರಾರ್ಥನೆ ನಂತರ ಮಕ್ಕಳು ಪಾನಿಪೂರಿ ಸೇವನೆ ಮಾಡಿ ಅರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹಜರತ್ ಬಿಲಾಲ್ ಹೆಸರಿನ ಮಗು ಮೃತಪಟ್ಟಿದೆ. ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದು, ಕೆಲ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ ಎಂದರು.

45ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಆಹಾರ ಗುಣಮಟ್ಟ ಕಾಯ್ದೆ ಪ್ರಕಾರ ನೋಂದಾಯಿಸಿಕೊಂಡರು. ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪ ತಹಸೀಲ್ದಾರ್ ಆರ್.ರವಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹದೇವ ಕಾನಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ಡಾ. ಪ್ರಶಾಂತ್ ಕುಮಾರ್, ಸಮುದಾಯ ಅಧಿಕಾರಿ ದಿನಕರ್, ಆರೋಗ್ಯ ನಿರೀಕ್ಷಕ ಎಂ.ಉಮ್ಮಣ್ಣ, ಸುಧಾ ಸುಲಾಕೆ, ಪರಿಸರ ಎಂಜಿನಿಯರ್ ಉಮೇಶ್, ಶಿವರಾಜ್ ಕೂಸಗಟ್ಟೆ, ಸುರಕ್ಷತಾಧಿಕಾರಿ ನವೀನ್, ಪಿಎಸ್‌ಐ ಮಹದೇವ್ ಮತ್ತಿತರರು ಇದ್ದರು.

- - - -ಚಿತ್ರ:-೧:

ಮಲೇಬೆನ್ನೂರಿನ ಬೀದಿಬದಿ ವ್ಯಾಪಾರಿಗಳಿಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಉದ್ಘಾಟಸಿದರು.