ಸಾರಾಂಶ
ರಾಮನಗರ: ವಿದ್ಯಾರ್ಥಿಗಳು ಪಠ್ಯ ಓದಿಗೆ ನೀಡುವ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆ ಮತ್ತು ಸಮಾಜಮುಖಿ ಕೆಲಸಗಳಿಗೆ ಒತ್ತು ನೀಡಬೇಕೆಂದು ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ನಾಗೇಶ್ ತಿಳಿಸಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಶನಿವಾರ ನಡೆದ ಬೆಂಗಳೂರಿನ ಗುಪ್ತ ಕಾಲೇಜಿನಿ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೊರಗಿನ ವಾತಾವರಣದಲ್ಲಿ ಸಮಾಜಮುಖಿ ಶಿಕ್ಷಣ ಪಡೆಯಬಹುದು. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸೇವಾ ಮನೋಭಾವ, ಸಹಕಾರ, ಪರಿಸರ ಕಾಳಜಿ ಸಹಬಾಳ್ವೆಯಂತಹ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶಿಬಿರದಲ್ಲಿ ಅವಕಾಶವಿದೆ ಎಂದು ಹೇಳಿದರು.ಪ್ರಾಂಶುಪಾಲ ಜಿ.ಆರ್.ಸುಧಾಕರ್ ಮಾತನಾಡಿ, ಇಂದಿನ ಯುವ ಪೀಳಿಗೆ ಮೇಲೆ ಮಕ್ಕಳ ಪಾಲಕರು ಹತ್ತಾರು ಭರವಸೆಗಳನ್ನು ಇರಿಸಿದ್ದಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಯುವಕರ ಪಾತ್ರ ಮಹತ್ವವಾಗಿದೆ. ಶಿಕ್ಷಣ ಪಡೆಯುವಾಗಲೇ ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆ, ಪರಿಸರ ಕಾಳಜಿ ಅಳವಡಿಸಿಕೊಂಡು ಮುನ್ನಡೆದಾಗ ಕಿರಿಯರು ನಿಮ್ಮ ಮಾರ್ಗವನ್ನ ಅನುಸರಿಸುತ್ತಾರೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಪ್ರತಿ ವರ್ಷ ನಗರದಲ್ಲಿನ ನಮ್ಮ ಕಾಲೇಜು ವತಿಯಿಂದ ಎನ್ನೆಸ್ಸೆಸ್ ಶಿಬಿರವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಮೂಲಕ ಮಕ್ಕಳಲ್ಲಿ ಗ್ರಾಮೀಣ ಸಂಸ್ಕೃತಿ, ಸಂಸ್ಕಾರ ಹಾಗೂ ಗ್ರಾಮೀಣ ವಿಷಯಗಳನ್ನು ಮನದಟ್ಟು ಮಾಡಿಕೊಡುವ ಕೆಲಸ ಶಿಬಿರದ ಮೂಲಕ ಮಾಡುತ್ತಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ದೇವರಾಜಮ್ಮ, ಉಪನ್ಯಾಸಕರಾದ ಹೇಮಾವತಿ, ಆರ್ ಮಧುಕಾಳೆ, ಕಾರ್ಯಕ್ರಮಾಧಿಕಾರಿ ದಿನೇಶ್ ಇತರರಿದ್ದರು. ಇದೇ ವೇಳೆ ಎನ್ನೆಸ್ಸೆಸ್ ಶಿಬಿರದ ಅಂಗವಾಗಿ ಧ್ವಜಾರೋಹಣ, ಶಿಭಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋದಿಸಲಾಯಿತು.
ಪೋಟೋ೬ಸಿಪಿಟಿ೫:ರಾಮನಗರದ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಂಗಳೂರಿನ ಗುಪ್ತ ಕಾಲೇಜಿನ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಆಯೋಜಿಸಲಾಗಿತ್ತು.