ಶಿಕ್ಷಣದಷ್ಟೇ ಕ್ರೀಡೆಗಳಿಗೂ ಆದ್ಯತೆ ನೀಡಿ

| Published : Mar 13 2025, 12:52 AM IST

ಸಾರಾಂಶ

ವಿಜಯಪುರ: ಶಿಕ್ಷಣದೊಂದಿಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಪುರಸಭಾ ಮಾಜಿ ಅಧ್ಯಕ್ಷ ಎನ್ ಸತೀಶ್ ಕುಮಾರ್ ತಿಳಿಸಿದರು.

ವಿಜಯಪುರ: ಶಿಕ್ಷಣದೊಂದಿಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಪಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಪುರಸಭಾ ಮಾಜಿ ಅಧ್ಯಕ್ಷ ಎನ್ ಸತೀಶ್ ಕುಮಾರ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಯುವಕರು ಮನಸ್ಸು ಮಾಡಿದರೆ ಜೀವನದಲ್ಲಿ ಎಂತಹ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸುವುದಕ್ಕೆ ಸಾಧ್ಯ. ಕ್ರೀಡೆಗಳು ನಮಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಒತ್ತಡದಲ್ಲಿ ಮನಸ್ಥಿತಿಯ ನಿರ್ವಹಣೆ ಕಲಿಸುತ್ತದೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆ, ಯೋಗ, ಧ್ಯಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ದೇವನಹಳ್ಳಿ ಮುರಳಿ ಮಾತನಾಡಿ, ಯುವಕರು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ದೇಹ ದಾರ್ಢ್ಯತೆ ಕಾಪಾಡಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಸಾಧ್ಯ. ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಒಂದು ಸೋಲು ನೂರಾರು ಗೆಲವುಗಳನ್ನು ತಂದು ಕೊಡುತ್ತದೆ. ಸೋತ ಮಾತ್ರಕ್ಕೆ ನಿರಾಶರಾಗಬಾರದು. ನಿರಂತರ ಸೋಲು, ನಮ್ಮ ದಿಕ್ಕನ್ನು ಬದಲಿಸುವುದರ ಜೊತೆಗೆ, ಜೀವನದಲ್ಲಿ ಎದುರಾಗುವಂತಹ ಎಲ್ಲಾ ಸವಾಲುಗಳು, ಸಮಸ್ಯೆಗಳನ್ನು ಎದುರಿಸುವಂತಹ ಸಾಮರ್ಥ್ಯವನ್ನು ತಂದು ಕೊಡುತ್ತವೆ. ಆದ್ದರಿಂದ ಪರಸ್ಪರ ಸಾಮರಸ್ಯ ಕಾಪಾಡಿಕೊಂಡು ಸೌಹಾರ್ದತೆಯಿಂದ ಟೂರ್ನಿಮೆಂಟ್‌ನಲ್ಲಿ ಆಡಬೇಕು ಎಂದರು.

ಟೂರ್ನಮೆಂಟ್‌ನಲ್ಲಿ ಹುಡುಗರ ತಂಡ ಪ್ರಥಮ ಬಹುಮಾನ ೩೦,೦೦೦ ಹಾಗೂ ಪ್ರಶಸ್ತಿ ಪತ್ರ, ಮಾನಿಂಗ್ ಬಾಯ್ಸ್ ಕ್ರಿಕೆಟ್ ತಂಡ ದ್ವಿತೀಯ ಬಹುಮಾನ ೨೦,೦೦೦ ನಗದು ಹಾಗೂ ಪ್ರಶಸ್ತಿ ಪಡೆದುಕೊಂಡರು.

ಈ ವೇಳೆ ದೇವನಹಳ್ಳಿ ಪುರಸಭಾ ಸದಸ್ಯ ಬಾಲರಾಜು ಟೂರ್ನಮೆಂಟ್ ಆಯೋಜಕರಾದ ವಿನಯ್, ಲೋಕೇಶ್, ರವಿಕುಮಾರ್, ಹರಿಕೃಷ್ಣ, ಗಿರೀಶ್‌ ಉಪಸ್ಥಿತರಿದ್ದರು.