ಸಾರಾಂಶ
ಪರಿಶಿಷ್ಟ ಜಾತಿ, ಪಂಗಡದ 60ರಿಂದ 70 ಬಡ ಕುಟುಂಬಗಳು ತಲಾ ಎರಡು ಎಕರೆಯಂತೆ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಗುಂಪು ಕಟ್ಟಿಕೊಂಡು ಬಂದು ಬಗರ್ ಹುಕ್ಕುಂ ಜಮೀನಿಗೆ ನುಗ್ಗಿ ದೌರ್ಜನ್ಯ ಮಾಡುತ್ತಿದ್ದಾರೆ.
ಕಲಘಟಗಿ:
ತಾಲೂಕಿನ ಗಂಜಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ನಗರ ಹಾಗೂ ಸುತಗಟ್ಟಿ ಗ್ರಾಮದ ಬಗರ್ ಹುಕ್ಕುಂಸಾಗುವಳಿದಾರರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಯಲ್ಲಪ್ಪ ಗೋಣ್ಣೆನವರ ಅವರಿಗೆ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಆನಂತರ ಮಾತನಾಡಿದ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮಾದೇವ ಮಾದರ, ಗಂಜಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿ, ಪಂಗಡದ 60ರಿಂದ 70 ಬಡ ಕುಟುಂಬಗಳು ತಲಾ ಎರಡು ಎಕರೆಯಂತೆ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಗುಂಪು ಕಟ್ಟಿಕೊಂಡು ಬಂದು ಬಗರ್ ಹುಕ್ಕುಂ ಜಮೀನಿಗೆ ನುಗ್ಗಿ ದೌರ್ಜನ್ಯ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸುರೇಶ ಹೊಸಮನಿ ಮಾತನಾಡಿ, ಈಗಾಗಲೇ ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸಾಮಾಜೀಕರಣ ಇಲಾಖೆ ವತಿಯಿಂದ ಯಾವುದೇ ರೀತಿ ಕಾಮಗಾರಿ ಮುಂದುವರಿಸಬಾರದು. ಒಂದು ವೇಳೆ ಮುಂದುವರಿಸಿದರೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಲಕ್ಷ್ಮಣ ಬಕ್ಕಾಯಿ, ಪರಶುರಾಮ ಎತ್ತಿನಗುಡ್ಡ, ಬಸವರಾಜ ಹರಿಜನ, ಮಲ್ಲಪ್ಪ ಹರಿಜನ, ಲಕ್ಷ್ಮಣ ಹರಿಜನ, ವಿಜಯಲಕ್ಷ್ಮಿ ಹರಿಜನ, ಉಮೇಶ ಹರಿಜನ ಸೇರಿದಂತೆ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.