ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಡಾ.ಅಜಯಸಿಂಗ್

| Published : Apr 20 2024, 01:00 AM IST

ಸಾರಾಂಶ

ಜೇವರ್ಗಿಯಲ್ಲಿ ಭೀಮ ಆರ್ಮಿ ಸಂಘಟನೆ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಅಂಬೇಡ್ಕರ್ ತತ್ವಾದರ್ಶಗಳು ಸಮಾಜಕ್ಕೆ ಇಂದಿಗೂ ದಾರಿದೀಪಗಳಾಗಿವೆ. ಯುವಕರು ದುಷ್ಚಟಗಳನ್ನು ಬಿಡಬೇಕು ಎಂದು ಶಾಸಕ ಡಾ. ಅಜಯಸಿಂಗ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಇದರಿಂದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಹೇಳಿದರು.

ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಭೀಮ ಆರ್ಮಿ ಸಂಘಟನೆ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಮಂತ್ರಗಳನ್ನು ಅಳವಡಿಸಿಕೊಂಡಿದ್ದರು. ಅಂಬೇಡ್ಕರ್ ತತ್ವಾದರ್ಶಗಳು ಸಮಾಜಕ್ಕೆ ಇಂದಿಗೂ ದಾರಿದೀಪಗಳಾಗಿವೆ. ಯುವಕರು ದುಷ್ಚಟಗಳನ್ನು ಬಿಡಬೇಕು ಎಂದರು.

ಜೇವರ್ಗಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಭವನದಲ್ಲಿ ಗ್ರಂಥಾಲಯ ಆರಂಭಿಸುವ ಮೂಲಕ ಪ್ರತಿಯೊಬ್ಬರಿಗೂ ಪ್ರತಿಕೆಗಳನ್ನು ಓದಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಪಟ್ಟಣದ ನಾಗರಿಕರು ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕರಿಘೊಳೇಶ್ವರ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಮಲ್ಲಮ್ಮ ಕೊಬ್ಬಿನ್, ಭೀಮ ಆರ್ಮಿ ತಾಲ್ಲೂಕು ಘಟಕದ ಅಧ್ಯಕ್ಷ ಸುನೀಲ ರಾಜಾಹುಲಿ, ಶರಣು ಬಡಿಗೇರ, ನಾಗು ಬಟ್ನಾಳ, ಮಲ್ಲು ಬಟ್ನಾಳ, ಕಲ್ಲೂರ (ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಕೂಡಲಗಿ, ಶಹಾಬಾದ ನಗರಸಭೆ ಸದಸ್ಯ ಕಾಶಿನಾಥ, ವಿಶ್ವನಾಥ ಚವ್ಹಾಣ, ಮರೆಪ್ಪ ಸರಡಗಿ, ಮಹೇಶ ಅಂಕಲಗಿ, ನಾಗು ಗುತೇದಾರ, ಪ್ರವೀಣ ತಾವಡೆ, ಸಮೀರ್, ಮಿಲಿಂದ ಸಾಗರ ನಿರೂಪಿಸಿದರು. ಆಕಾಶ ಕಾಂಬಳೆ ಸ್ವಾಗತಿಸಿದರು. ವಿಶ್ವ ಆಲೂರ ವಂದಿಸಿದರು.