ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ ಅಪೌಷ್ಟಿಕತೆ ತಪ್ಪಿಸಿ: ಡಾ.ಮಧುಸೂದನ

| Published : Sep 25 2024, 01:01 AM IST

ಸಾರಾಂಶ

ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಗುಣ ಮಟ್ಟದ ಆಹಾರ ನೀಡುವಂತಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಮಧುಸೂದನ ಹೇಳಿದರು. ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ ಸಾಧಾರಣ ಅಪೌಷ್ಟಿಕತೆಯಿಂದ 264 ಮಕ್ಕಳು ಹಾಗೂ ತೀವ್ರ ಅಪೌಷ್ಟಿಕತೆಯಿಂದ 50 ಮಕ್ಕಳು ತುತ್ತಾಗಿದ್ದು, ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಗುಣಮಟ್ಟದ ಆಹಾರ ನೀಡುವಂತಾಗಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮಧುಸೂದನ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಹೊರ ರೋಗಿಗಳ ವಿಭಾಗದಲ್ಲಿ ಮಂಗಳವಾರ ನಡೆದ ‘ಪೋಷಣ ಅಭಿಯಾನ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಿದೆ ಎಂದರು.

ಇತ್ತೀಚಿನ ದಿನಗಳ ಜೀವನ ಶೈಲಿಯಲ್ಲಿನ ಬದಲಾವಣೆ, ಗುಣಮಟ್ಟದ ಆಹಾರ ಪಡೆಯದಿರುವುದು ಮತ್ತಿತರ ಕಾರಣವಾಗಿದೆ. ಆದ್ದರಿಂದ ಸರ್ಕಾರದಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ ಅಪೌಷ್ಟಿಕತೆ ತಡೆಯಬೇಕು ಎಂದರು.

ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಸಮತೋಲಿತ ಆಹಾರವನ್ನು ನೀಡುವಂತಾಗಬೇಕು ಎಂದು ಡಾ.ಮಧಸೂದನ್ ಅವರು ಸಲಹೆ ನೀಡಿದರು.

ಅಪೌಷ್ಟಿಕತೆಯು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ರೋಗಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ ಎಂದು ವಿವರಿಸಿದರು.

ಸಮತೋಲಿತ ಆಹಾರವಾದ ಹಸಿರು ಎಲೆಯುಕ್ತ ತರಕಾರಿ ಮತ್ತು ಹಣ್ಣುಗಳು, ಬೇಳೆ ಕಾಳುಗಳು, ಏಕದಳ ಮತ್ತು ದ್ವಿದಳ ಧಾನ್ಯಗಳು, ಶೇಂಗಾ ಹಾಗೂ ವಿಶೇಷವಾಗಿ ಸಿರಿಧಾನ್ಯ ಬಳಸುವಂತಾಗಬೇಕು ಎಂದು ಅವರು ಹೇಳಿದರು.

ಹಾಗೆಯೇ ರಕ್ತಹೀನತೆ ಕಾಯಿಲೆ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಶಾರೀರಿಕ ಮತ್ತು ಭೌದ್ಧಿಕ ಬೆಳವಣಿಗೆ ಅತೀಮುಖ್ಯವಾಗಿದೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ವಿಶಾಲ್ ಕುಮಾರ್ ಅವರು ಮಾತನಾಡಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸುವಂತಾಗಬೇಕು. ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.

ಡಾ.ನರಸಿಂಹ ರೈ ಅವರು ಮಾತನಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಿಸಿ ಮಕ್ಕಳ ಆರೋಗ್ಯಯುತ ಬೆಳವಣಿಗೆಗೆ ವಿಶೇಷ ಆಸಕ್ತಿ ವಹಿಸಬೇಕು ಎಂದರು. ನರ್ಸಿಂಗ್ ಕಾಲೇಜಿನ ಮಂಜುಳ, ಶುಶ್ರೂಷಕ ಅಧೀಕ್ಷಕಿ ವೀಣಾ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಇತರರು ಇದ್ದರು.