ಸಹಕಾರ ಕ್ಷೇತ್ರದಲ್ಲಿ ಯುವಕರಿಗೆ ಪ್ರಾತಿನಿಧ್ಯ ನೀಡಿ: ಶಾಸಕ ಶರತ್‌ ಬಚ್ಚೇಗೌಡ

| Published : Nov 17 2024, 01:23 AM IST

ಸಾರಾಂಶ

ಸಹಕಾರ ಕ್ಷೇತ್ರ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪುಣೆ ಹಾಗೂ ಸೂರತ್‌ನಿಂದ ತಂತ್ರಜ್ಞರನ್ನು ಕರೆಸಿಕೊಂಡು ನೂತನ ಸಾಫ್ಟ್‌ವೇರ್ ಅಳವಡಿಸಿಕೊಳ್ಳುವ ಬದಲು ಯುವಜನತೆಯನ್ನು ಬಳಸಿಕೊಂಡರೆ, ನಿರುದ್ಯೋಗ ಸಮಸ್ಯೆ ನಿವಾರಣೆ, ಹೊರಗಿನವರಿಗೆ ಹಣ ವೆಚ್ಚವನ್ನು ತಡೆಯಬಹುದು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಅನ್ನದಾತರ ಅಭ್ಯುದಯಕ್ಕೆ ನೂರಾರು ವರ್ಷಗಳಿಂದ ಶ್ರಮಿಸುತ್ತಿರುವ ಸಹಕಾರ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿ ಮತ್ತಷ್ಟು ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ೪ ವರ್ಷಗಳಿಂದ ಸಹಕಾರ ಕ್ಷೇತ್ರ ಸುವರ್ಣ ಕಾಲವಾಗಿ ಬದಲಾಗಿದೆ. ಸಹಕಾರ ಸಂಘಗಳು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿವೆ. ಕ್ಷೇತ್ರದ ಅಭಿವೃದ್ಧಿಗೆ ಯುವಶಕ್ತಿಯನ್ನು ಬಳಸಿಕೊಳ್ಳಬೇಕಿದೆ, ಯುವಕರಿಗೆ ತರಬೇತಿ ಕಾರ್ಯಾಗಾರ, ಉದ್ಯೋಗವಕಾಶ ಕಲ್ಪಿಸುವ ಬಗ್ಗೆ ಸಹಕಾರ ಒಕ್ಕೂಟ ಸರ್ಕಾರದ ಬಳಿ ಪ್ರಸ್ತಾವನೆ ಮಂಡಿಸಬೇಕಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ಸಹಕಾರ ಕ್ಷೇತ್ರ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪುಣೆ ಹಾಗೂ ಸೂರತ್‌ನಿಂದ ತಂತ್ರಜ್ಞರನ್ನು ಕರೆಸಿಕೊಂಡು ನೂತನ ಸಾಫ್ಟ್‌ವೇರ್ ಅಳವಡಿಸಿಕೊಳ್ಳುವ ಬದಲು ಯುವಜನತೆಯನ್ನು ಬಳಸಿಕೊಂಡರೆ, ನಿರುದ್ಯೋಗ ಸಮಸ್ಯೆ ನಿವಾರಣೆ, ಹೊರಗಿನವರಿಗೆ ಹಣ ವೆಚ್ಚವನ್ನು ತಡೆಯಬಹುದು ಎಂದರು.

ಸಹಕಾರ ಮಂಡಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿದರು. ರಾಜ್ಯ ಸಹಕಾರ ಮಂಡಳಿ ನಿರ್ದೇಶಕ ಕೆ.ಎಸ್. ಸುರೇಶ್ ಗೌಡ, ಬಮೂಲ್ ಒಕ್ಕೂಟದ ಉಪಾಧ್ಯಕ್ಷ ಕೆ.ಎಂ ಮಂಜುನಾಥ್, ನಾಮ ನಿರ್ದೇಶಿತ ನಿರ್ದೇಶಕ ಎಲ್ ಆ್ಯಂಡ್ ಟಿ ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ ಸತೀಶ್ ಗೌಡ, ಎಸ್.ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ ನಾರಾಯಣ್ ಶರ್ಮ, ವ್ಯವಸ್ಥಾಪಕ ನಂಜುಂಡೇಗೌಡ ಹಾಗೂ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರು ಹಾಜರಿದ್ದರು.