ಎಸ್‌.ಎಂ. ಕೃಷ್ಣ ಸರ್ಕಾರವಿದ್ದಾಗ ಎ.ಎಂ. ಹಿಂಡಸಗೇರಿ ಮಂತ್ರಿಯಾಗಿದ್ದರು. ಅದಾದ ಬಳಿಕ ಕಿತ್ತೂರ ಕರ್ನಾಟಕ ಭಾಗದ ಅಲ್ಪಸಂಖ್ಯಾತರಿಗೆ ಮಂತ್ರಿ ಭಾಗ್ಯವೇ ದೊರೆತಿಲ್ಲ. ಹೀಗಾಗಿ ಈ ಬಾರಿ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಸಂಕ್ರಾಂತಿ ಬಳಿಕ ಸರ್ಕಾರದಲ್ಲಿ ಕ್ರಾಂತಿ ಆಗುತ್ತದೆ. ಸಂಪುಟ ಪುನಾರಚಣೆ ಆಗುತ್ತದೆಯೋ, ನಾಯಕತ್ವ ಬದಲಾವಣೆಯಾಗುತ್ತದೆಯೋ? ಗೊತ್ತಿಲ್ಲ. ಆದರೆ, ಈ ಬಾರಿ ವಿಧಾನಪರಿಷತ್‌ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್‌ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಒಕ್ಕೊರಲಿನ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅಧಿಕಾರ ಹಂಚಿಕೆಯ ಗೊಂದಲ ಏನೇ ಇದ್ದರೂ ಸಂಪುಟ ಪುನಾರಚನೆ ಆಗಿಯೇ ಆಗುತ್ತದೆ ಎನ್ನುವ ವಿಶ್ವಾಸದೊಂದಿಗೆ ಈ ಇಬ್ಬರು ನಾಯಕರ ಬೆಂಬಲಿಗರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.

ಪುನಾರಚನೆಯಾದರೆ ಶೇ. 50ರಷ್ಟು ಸಚಿವರನ್ನು ಕೈಬಿಟ್ಟು ಅವರಿಗೆ ಪಕ್ಷ ಸಂಘಟನೆಯ ಕೆಲಸಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಆಗ ಹೊಸಬರಿಗೆ ಅವಕಾಶ ಸಿಗುತ್ತದೆ ಎಂಬೆಲ್ಲ ಮಾತುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಸಲೀಂ, ಪ್ರಸಾದ ಬೆಂಬಲಿಗರ ಹಕ್ಕೊತ್ತಾಯ ಜೋರಾಗಿ ಕೇಳಿಬರುತ್ತಿದೆ.

ಕಿತ್ತೂರು ಕರ್ನಾಟಕ:

ಎಸ್‌.ಎಂ. ಕೃಷ್ಣ ಸರ್ಕಾರವಿದ್ದಾಗ ಎ.ಎಂ. ಹಿಂಡಸಗೇರಿ ಮಂತ್ರಿಯಾಗಿದ್ದರು. ಅದಾದ ಬಳಿಕ ಕಿತ್ತೂರ ಕರ್ನಾಟಕ ಭಾಗದ ಅಲ್ಪಸಂಖ್ಯಾತರಿಗೆ ಮಂತ್ರಿ ಭಾಗ್ಯವೇ ದೊರೆತಿಲ್ಲ. ಹೀಗಾಗಿ ಈ ಬಾರಿ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ನೀಡಬೇಕು. ಅದರಲ್ಲೂ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ಸಿನಲ್ಲಿರುವ, ಪಕ್ಷಕ್ಕೆ ಅತ್ಯಂತ ನಿಷ್ಠಾವಂತ, ಪಕ್ಷ ಸಂಘಟನೆಯಲ್ಲೂ ಸೈ ಎನಿಸಿರುವ ಸಲೀಂ ಅಹ್ಮದ್‌ ಅವರಿಗೆ ಮಂತ್ರಿಗಿರಿ ನೀಡಬೇಕು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಜತೆಗೆ ಸಲೀಂ ಅಹ್ಮದ್‌ ಕೂಡ ತಾವೂ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಹೀಗೆ ಹೇಳುವ ಮೂಲಕ ಪಕ್ಷ ನಿಷ್ಠೆ ಪ್ರದರ್ಶಿಸಿದ್ದಾರೆ. ಹೀಗಾಗಿ ಈ ಭಾಗದ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಆಯ್ಕೆಯಾಗಿರುವ ಸಲೀಂಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕು ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

ಪ್ರಸಾದ ಅಬ್ಬಯ್ಯ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ನಿಗಮ ಮಂಡಳಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಅಭಿಮಾನಿಗಳದ್ದು.

ಸಂಕ್ರಾಂತಿ ಬಳಿಕ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ.

ಸಲೀಂ ಅಹ್ಮದ್‌, ಸರ್ಕಾರಿ ಮುಖ್ಯ ಸಚೇತಕರು, ವಿಧಾನಪರಿಷತ್‌