ಸರ್ಕಾರಿ ಆಸ್ಪತ್ರೆಗಳಲ್ಲಿ ನಗುಮುಖದ ಸೇವೆ ನೀಡಿ

| Published : Aug 05 2024, 12:35 AM IST

ಸರ್ಕಾರಿ ಆಸ್ಪತ್ರೆಗಳಲ್ಲಿ ನಗುಮುಖದ ಸೇವೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ತುರ್ತಾಗಿ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಶಾಸಕ ಎಚ್ ಕೆ ಸುರೇಶ್ ತಿಳಿಸಿದರು. ಯಾವುದೇ ರೋಗಿಗಳು ಬಂದರೆ ಅವರಿಗೆ ನಗುಮುಖದಿಂದ ಸ್ವಾಗತ ಮಾಡಿದರೆ, ಅವರ ಅರ್ಧ ಕಾಯಿಲೆಯು ಗುಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಿಮಗೆ ಸೂಚನೆಯನ್ನು ನೀಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ತುರ್ತಾಗಿ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಶಾಸಕ ಎಚ್ ಕೆ ಸುರೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ ರಕ್ಷಾ ಸಮಿತಿಯ ಸದಸ್ಯ ಬಿಎನ್ ಚಂದ್ರಶೇಖರ್ ಅವರು ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ರೋಗಿಗಳೊಂದಿಗೆ ಉಡಾಫೆ ವರ್ತನೆ ತೋರುತ್ತಿದ್ದಾರೆ, ಆ್ಯಂಬುಲೆನ್ಸ್ ಚಾಲಕರು ರೋಗಿಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯದೆ ಖಾಸಗಿ ಆಸ್ಪತ್ರೆಗಳಿಗೆ ಬಿಡುತ್ತಿದ್ದಾರೆ, 2017ರಿಂದ ಇಲ್ಲಿಯವರೆಗೆ ದಕ್ಷ ಸಮಿತಿ ಸಭೆ ಕರೆದಿಲ್ಲ, ಬಹುತೇಕ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಈಗಲೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ, ಪುರಸಭೆ ಮಾಜಿ ಸದಸ್ಯ ಜಯಶ್ರೀ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು ಮಾಹಿತಿ ಬಂದಿಲ್ಲ ಇತ್ಯಾದಿ ವಿಚಾರಗಳನ್ನು ಶಾಸಕರ ಗಮನಕ್ಕೆ ತಂದರು.

ಈ ಬಗ್ಗೆ ಶಾಸಕರು ಮಾತನಾಡಿ, ಯಾವುದೇ ರೋಗಿಗಳು ಬಂದರೆ ಅವರಿಗೆ ನಗುಮುಖದಿಂದ ಸ್ವಾಗತ ಮಾಡಿದರೆ, ಅವರ ಅರ್ಧ ಕಾಯಿಲೆಯು ಗುಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನಿಮಗೆ ಸೂಚನೆಯನ್ನು ನೀಡಲಾಗಿದೆ. ಅಲ್ಲದೆ ರಾತ್ರಿ ಪಾಳಿದಲ್ಲಿ ಕೆಲಸ ನಿರ್ವಹಿಸುವ ವೈದ್ಯರು ರೋಗಿಗಳಿಗೆ ತಕ್ಷಣವೇ ಚಿಕಿತ್ಸೆಯನ್ನ ನೀಡಬೇಕು. ಸಣ್ಣಪುಟ್ಟ ಕಾಯಿಲೆಗಳಿಗೂ ಹಾಸನ ಅಥವಾ ಚಿಕ್ಕಮಗಳೂರಿಗೆ ಬರೆದು ಕೊಡಬಾರದು ವಿಶೇಷವಾಗಿ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲಾ ರೀತಿ ಸೌಲಭ್ಯಗಳು ಇರುವ ಕಾರಣದಿಂದ ಮಾತ್ರೆ ಔಷಧಿಗಳನ್ನ ಹೊರಗಡೆಗೆ ಬರೆದುಕೊಡುವ ವ್ಯವಸ್ಥೆಯನ್ನು ವೈದ್ಯರು ಮೊದಲು ಬಿಡಬೇಕು ಎಂದು ತಿಳಿಸಿದರು.

ಹಾಸನದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ತಿಪ್ಪೇಸ್ವಾಮಿ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಅಸ್ವಸ್ಥಗೊಂಡರೆ ಅವರಿಗೆ ಶೀಘ್ರವೇ ಚಿಕಿತ್ಸೆ ನೀಡಲು ಬೇಲೂರಿನಲ್ಲಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯನ್ನು ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನಾವು ಇಂದು ನಡೆದ ಆರೋಗ್ಯ ರಕ್ಷಾ ಸಮಿತಿಯಲ್ಲಿ ನಿರ್ಧರಿಸಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು ಶೀಘ್ರವೇ ನಿರ್ಮಾಣ ಮಾಡಲಾಗುತ್ತದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಆಡಳಿತ ಅಧಿಕಾರಿಯಾದ ಡಾ. ಸುಧಾ ಅವರು ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಯಾವ ಕಾರಣಕ್ಕು ಆಡಳಿತ ಮಂಡಳಿ ಸಿಬ್ಬಂದಿ ಅಧಿಕಾರಿಗಳು ಮೇಲಾಧಿಕಾರಿಗಳ ವಿರುದ್ಧ ಸವಾರಿ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಶೌಚಾಲಯಗಳ ಸ್ವಚ್ಛತೆ, ಕ್ಯಾಂಟೀನ್‌ನಲ್ಲಿ ಶುಚಿರುಚಿಯಾದ ಅಡುಗೆ ಇವುಗಳ ಬಗ್ಗೆ ಆಡಳಿತ ಅಧಿಕಾರಿಗಳು ವಿಶೇಷವಾಗಿ ಗಮನ ನೀಡಬೇಕಿದೆ. ಅಲ್ಲದೆ ಮಳೆಗಾಲದಲ್ಲಿ ಈಗಾಗಲೇ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳಿಗೆ ಆಸ್ಪತ್ರೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಚಿಕಿತ್ಸೆ ನೀಡಬೇಕಿದೆ. ವಿಶೇಷವಾಗಿ ಅರೇಹಳ್ಳಿ, ನಾಗೇನಹಳ್ಳಿ, ಹಳೇಬೀಡು,ಹಗರೆ ಮುಂತಾದ ಕಡೆಯಲ್ಲಿ ಎಲ್ಲ ಸೌಲಭ್ಯ ಇರುವುದರಿಂದ ಬೇಲೂರಿಗೆ ಕಳಿಸುವ ಪ್ರಮೇಯವನ್ನ ಇಟ್ಟುಕೊಳ್ಳಬಾರದು ಎಂದು ಆರೋಗ್ಯ ಅಧಿಕಾರಿಯಾದ ಡಾ. ವಿಜಯವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಸಂಧ್ಯಾ, ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಚಂದ್ರಶೇಖರ್, ಸುದೇವ್, ದೇವರಾಜ್, ಹರ್ಷ, ರೇಣುಕಯ್ಯ, ಜ್ಯೋತಿ, ರಘು, ಚಂದ್ರಶೇಖರ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.