ಮಕ್ಕಳಿಗೆ ಆಧ್ಯಾತ್ಮಿಕತೆಯ ಸಾರ ಉಣಬಡಿಸಿ: ಕೆ. ಅಪ್ಪಣಾಚಾರ್ಯ

| Published : Jan 30 2025, 12:32 AM IST

ಮಕ್ಕಳಿಗೆ ಆಧ್ಯಾತ್ಮಿಕತೆಯ ಸಾರ ಉಣಬಡಿಸಿ: ಕೆ. ಅಪ್ಪಣಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಧರ್ಮವನ್ನು ಅನುಕರಣೆ ಮಾಡಿದರೂ ಪರವಾಗಿಲ್ಲ. ಬೇರೆ ಧರ್ಮದ ನಿಂದನೆ ಮಾಡಬಾರದು. ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯಾಗಿದೆ. ಅದರ ನಿರ್ಮಾಣಕ್ಕಿಂತ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ.

ಹುಬ್ಬಳ್ಳಿ:

ಭಾರತೀಯರಾಗಿ ಹುಟ್ಟಿದ ನಾವು ದೇಶ, ಭಾಷೆ ಹಾಗೂ ಧರ್ಮಕ್ಕಾಗಿ ತುಡಿಯಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮನಸೋಲದೇ ನಮ್ಮ‌ ಮಕ್ಕಳಿಗೆ ಆಧ್ಯಾತ್ಮಿಕತೆಯ ಸಾರ ಉಣಬಡಿಸುವ ಕಾರ್ಯವಾಗಲಿ ಎಂದು ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ವಿಶೇಷಾಧಿಕಾರಿ ಕೆ. ಅಪ್ಪಣಾಚಾರ್ಯ ಹೇಳಿದರು.

ಇಲ್ಲಿನ ಭವಾನಿ ನಗರದ ಶ್ರೀನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದ‌ಲ್ಲಿ ಸಂಯುತಾ ಪ್ರತಿಷ್ಠಾನದಿಂದ ಪಂ. ದಾಮೋದರಾಚಾರ್ಯ ಉಮರ್ಜಿ ಸ್ಮರಣಾರ್ಥ ಬುಧವಾರ ಸಂಜೆ ಆಯೋಜಿಸಿದ್ದ "ಕನಕ- ಪುರಂದರೋತ್ಸವ -2025 ಸಂಯುತಾ ಪುರಂದರ ಪ್ರಶಸ್ತಿ ಪ್ರದಾನ " ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಯಾವುದೇ ಧರ್ಮವನ್ನು ಅನುಕರಣೆ ಮಾಡಿದರೂ ಪರವಾಗಿಲ್ಲ. ಬೇರೆ ಧರ್ಮದ ನಿಂದನೆ ಮಾಡಬಾರದು. ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯಾಗಿದೆ. ಅದರ ನಿರ್ಮಾಣಕ್ಕಿಂತ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಮತ, ಪಂಥ ಬಿಟ್ಟು ಎಲ್ಲರೂ ಒಂದಾಗಿ ಸಾಗೋಣ. ಧರ್ಮ ಮತ್ತು ದೇಶದ ರಕ್ಷಣೆಗಾಗಿ ನಾವೆಲ್ಲ ಒಂದಾಗೋಣ ಎಂದು‌ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ, ಕನಕದಾಸರು ಮತ್ತು ಪುರಂದರ ದಾಸರು ಇಬ್ಬರೂ ಸಾಹಿತ್ಯವನ್ನು ಬಳಸಿಕೊಂಡು ಸಮಾಜದ ಓರೆ-ಕೋರೆಗಳನ್ನು ತಿದ್ದಿದವರು. ಕನಕದಾಸರ ಭಕ್ತಿಗೆ ಮೆಚ್ವಿದ ಶ್ರೀಕೃಷ್ಣ, ದೇವಸ್ಥಾನದ ಗರ್ಭಗುಡಿಯಿಂದ ಹಿಂದಿರುಗಿ ದರ್ಶನ ನೀಡಿದ್ದ. ಪುರಂದರದಾಸರು 4.75 ಲಕ್ಷ ದಾಸ ಪದಗಳನ್ನು ನಿರ್ಮಿಸಿದ್ದರು. ಇಂತಹ ದಾಸವರೇಣ್ಯರ ಕೀರ್ತಿಯ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ. ಹೀಗಾಗಿ ದಾಸಶ್ರೇಷ್ಠರ ಕುರಿತಾದ ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಮುರಳಿಧರ ಮಳಗಿ, ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ‌ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ಕೋರಿ‌ ಮೌನಾಚರಣೆ ಮಾಡಲಾಯಿತು. ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪ್ರಹ್ಲಾದ ಪರ್ವತಿ, ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ, ಗೌರವಾಧ್ಯಕ್ಷ ಎ.ಸಿ. ಗೋಪಾಲ, ಭವಾನಿ ನಗರ ರಾಯರ ಮಠದ ವ್ಯವಸ್ಥಾಪಕ ಕೆ. ವೇಣುಗೋಪಾಲಾಚಾರ್ಯ, ಎಂಕೆಬಿಎಸ್ ಜಿಲ್ಲಾ ಸಂಚಾಲಕ ಬಿಂದು ಮಾಧವ ಪುರೋಹಿತ, ಗೋಪಾಲ ಕುಲಕರ್ಣಿ, ಸಹ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಕಾರ್ಯದರ್ಶಿ ಮನೋಹರ ಪರ್ವತಿ, ಪ್ರಧಾನ ಕಾರ್ಯದರ್ಶಿ ಜನಮೇಜಯ ಉಮರ್ಜಿ ಸೇರಿದಂತೆ ಹಲವರಿದ್ದರು.