ವಿಧಾನ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗೆ ಶಕ್ತಿ ತುಂಬಿ: ಬಿ.ವೈ.ವಿಜಯೇಂದ್ರ

| Published : May 27 2024, 01:09 AM IST / Updated: May 27 2024, 12:58 PM IST

ವಿಧಾನ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಅಭ್ಯರ್ಥಿಗೆ ಶಕ್ತಿ ತುಂಬಿ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದವರು ಪ್ರಾಮಾಣಿಕವಾಗಿ ಕೆಲಸ ಮಾಡಿದಂತೆಯೇ ಪರಿಷತ್ ಚುನಾವಣೆಯಲ್ಲಿಯೂ ಎನ್‌ಡಿಎಗೆ ಶಕ್ತಿ ತುಂಬಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.

  ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದವರು ಪ್ರಾಮಾಣಿಕವಾಗಿ ಕೆಲಸ ಮಾಡಿದಂತೆಯೇ ಪರಿಷತ್ ಚುನಾವಣೆಯಲ್ಲಿಯೂ ಎನ್‌ಡಿಎಗೆ ಶಕ್ತಿ ತುಂಬಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಬೋಗಾದಿಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರು ಭಾಗದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ದಾಖಲೆಯ ಮತಗಳ ಮೂಲಕ ಗೆಲ್ಲಿಸಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶಯದಂತೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದವರು ಪ್ರಾಮಾಣಿಕವಾಗಿ ಕೆಲಸ ಮಾಡಿದಂತೆ, ಈ ಬಾರಿಯೂ ಕೆಲಸ ಮಾಡಬೇಕು ಎಂದರು.

ರಾಜ್ಯದ ಮೂಲೆ ಮೂಲೆಗಳಲ್ಲೂ ನಮ್ಮ ಕಾರ್ಯಕರ್ತರಿಗಿಂತ ಹೊರಗಿನವರು ನಮ್ಮ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಜನರು ನೋಡಿದ್ದಾರೆ. ಲೋಕಸಭಾ ಚುನಾವಣೆ ನಂತರ ನಡೆಯುತ್ತಿರುವ ಈ ಚುನಾವಣೆ ನಮಗೆಲ್ಲ ಪ್ರತಿಷ್ಠೆಯಾಗಿದೆ. ಜೆಡಿಎಸ್ ಅಭ್ಯರ್ಥಿ ವಿವೇಕಾನಂದರು ಈಗಾಗಲೇ ಪ್ರಚಾರ ಹಮ್ಮಿಕೊಂಡಿದ್ದಾರೆ. ನಮ್ಮ ಪಕ್ಷದಿಂದ ಅವರನ್ನು ನಾವು ಗೆಲ್ಲಿಸುವುದಕ್ಕೆ ಶ್ರಮಿಸಬೇಕು ಎಂದರು.

ಮತದಾರರು ಪ್ರಬುದ್ಧರಾಗಿದ್ದಾರೆ. ಈ ಕ್ಷೇತ್ರ ಪಾವಿತ್ರ್ಯತೆ ಉಳಿಯಬೇಕಾದರೆ ಭಿನ್ನಾಭಿಪ್ರಾಯಬಿಟ್ಟು ಹಗಲಿರುಳು ಶ್ರಮಿಸಿದ ಮತದಾರರನ್ನು ಮನವೊಲಿಸಿ ವಿವೇಕಾನಂದರಿಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದರು.

ಸಂಸದ ಪ್ರತಾಪ ಸಿಂಹ ಅವರು ಸಾಕಷ್ಟು ಕೆಲಸ ಮಾಡಿದ್ದರೂ, ಅವರ ವಿಚಾರವಾಗಿ ರಾಷ್ಟ್ರೀಯ ನಾಯಕರು ಯಾರಿಗೆ ಟಿಕೆಟ್ ನೀಡಿದರೆ ಸೂಕ್ತ ಎಂಬುದು ಅವರೆ ತೀರ್ಮಾನಿಸಿದ್ದರು. ಯದುವೀರ್ ಅವರ ನಡವಳಿಕೆ, ಮಾತುಗಳು ನನಗೆ ತೃಪ್ತಿಯಿದ್ದು ಮೈಸೂರು ಭಾಗಕ್ಕೆ ಮುಂದಿನ ದಿನದಲ್ಲಿ ವಿಜಯೇಂದ್ರ ಏನು ಕೆಲಸ ಮಾಡುತ್ತಾರೆ ಎಂಬುದನ್ನು ನೀವೆ ನೋಡಿ ಎಂದರು.

ಕಾಂಗ್ರೆಸ್ ಪಕ್ಷ ಶಿಕ್ಷಣ ಕ್ಷೇತ್ರಕ್ಕೆ ತಂದಿರುವ ಕಂಟಕ ಹೇಗಿದೆ ಎಂಬುದು ತಿಳಿದಿದೆ. ಕಾಂಗ್ರೆಸ್ ಪಕ್ಷ ಅವರ ಯೋಗ್ಯತೆಗೆ ತಕ್ಕಂತೆ ಕೆಲಸ ಮಾಡಿಲ್ಲ, ಸರ್ಕಾರ ಬಂದ ಆರಂಭದಲ್ಲಿ ಮೊಸರಲ್ಲಿ ಕಲ್ಲುಹುಡುಕುವ ಕೆಲಸ ಮಾಡಿದ್ದಾರೆ. ಶಿಕ್ಷಣ ಸಚಿವರ ಬಗ್ಗೆ ಮಾತನಾಡುವ ಬದಲು ಹಾಗೆ ಸುಮ್ಮನಿದ್ದರೆ ಸಾಕು ಎಂದರು.

ಯಡಿಯೂರಪ್ಪ ಅವರು ಶಿಕ್ಷಕರಿಗೆ ಕೋವಿಡ್ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವೇತನ ನೀಡಿದರು. ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ. ಕುಮಾರಸ್ವಾಮಿ, ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಕಾಲದಲ್ಲಿ ಅಪಾರ ಕಾಳಜಿ ವಹಿಸಿದ್ದಾಗಿ ಅವರು ಹೇಳಿದರು.

ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಮ್ಮ ಎನ್.ಡಿ.ಎ ಅಭ್ಯರ್ಥಿ ಗೆಲ್ಲಿಸಬೇಕಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಪ್ರಚಾರ ಸಭೆ ಆಗಿದ್ದು, ಮೈತ್ರಿ ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗಿಯಾಗಿ ಎಂದರು.

ನಮ್ಮ ವ್ಯಾಪ್ತಿಯಲ್ಲಿನ ಶಾಲಾ-ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ ಪ್ರಚಾರ ಮಾಡಬೇಕಿದೆ. ಎಲ್ಲರಿಗೂ ಮಾರ್ಗದರ್ಶನ ನೀಡುವುದಕ್ಕೆ ಆಗುವುದಿಲ್ಲ, ನೀವೇ ಸ್ವತಃ ಮತ ಪ್ರಚಾರ ಮಾಡಬೇಕಿದೆ. ನಾವು ನಾಳೆ ಗಟ್ಟಿಯಾಗಬೇಕಾದರೆ, ಪಕ್ಷ ಉಳಿಸಬೇಕು, ತುಮಕೂರಿನಲ್ಲಿ ದಳ ಹಾಗೂ ಬಿಜೆಪಿ ಶಾಲು ಹಾಕಿದ್ದರು. ಆದರೆ, ಮೈಸೂರಿನಲ್ಲಿ ಬಿಜೆಪಿ ಶಾಲು ಮಾತ್ರ ಇದೆ. ಹಾಗಾಗಿ ಭಿನ್ನಾಭಿಪ್ರಾಯ ಇದ್ದರೆ ಅವುಗಳನ್ನು ತೆಗೆದುಹಾಕಿ ಮೈತ್ರಿ ಪಕ್ಷಕ್ಕೋಸ್ಕರ ಕೆಲಸ ಮಾಡಬೇಕು ಎಂದು ತಿಳಿಸಿದರು.

ನಮ್ಮ ಭಿನ್ನಾಭಿಪ್ರಾಯಗಳನ್ನ ಬಿಟ್ಟು ಒಗ್ಗಟ್ಟಾಗಿಲ್ಲ ಅಂದರೆ ಕಷ್ಟ ಆಗುತ್ತದೆ. ನಾವಿಲ್ಲಿ ಮತದಾರರಲ್ಲ ಮತದಾರರನ್ನು ಭೇಟಿ ಮಾಡಿ ಮತ ಹಾಕಿಸುವ ಕೆಲಸ ಮಾತ್ರ ನಾವು ಮಾಡಬೇಕು. ನಾನು ಈ ಮಾತನ್ನ ನೋವಿನಿಂದ ಹೇಳಿಕೊಳ್ಳುತ್ತಿದ್ದೇನೆ. ಈ ಚುನಾವಣೆ ಗೆದ್ದರೆ ಅಧಿಕಾರಿಗಳ ಮನಸ್ಥಿತಿ ಬದಲಾಗುತ್ತದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ನಗರ ವ್ಯಾಪ್ತಿಯ ಬೂತ್ ಗಳಲ್ಲಿ ಕೆ.ಆರ್.ಕ್ಷೇತ್ರದಲ್ಲಿ 1900 ಮತಗಳು ಇದ್ದು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲಿದ್ದು, ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೂ ಹೋಗುವಂತೆ ನಿರ್ಧಾರಿಸಿದ್ದೇವೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದರು.

ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದು, ನಾವು ಮೈಯೆಲ್ಲಾ ಕಣ್ಣಾಗಿಸಿ ಕೆಲಸ ಮಾಡಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಸೆಳೆಯುವುದು ಕಷ್ಟವೇನಲ್ಲ. ಶಾಲಾ- ಕಾಲೇಜಿಗೆ ಹೋದಾಗ ಕರಪತ್ರ ಹಂಚಬೇಕು, ಇಲ್ಲವಾದಲ್ಲಿ ಅವರ ಮನೆಗೆ ತಲುಪಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಎಂ. ಅಶ್ವಿನ್ ಕುಮಾರ್, ಸಿ.ಎಸ್.ನಿರಂಜನ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ಆರ್. ರಘು ಕೌಟಿಲ್ಯ, ಬಿಜೆಪಿ ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿದ್ದರಾಜು, ತೋಂಟದಾರ್ಯ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಈ.ಸಿ. ನಿಂಗರಾಜ ಗೌಡ, ಮಾಜಿ ಮೇಯರ್ ಗಳಾದ ಸಂದೇಶ್ ಸ್ವಾಮಿ, ಆರ್. ಲಿಂಗಪ್ಪ, ಎಂ.ಜೆ. ರವಿಕುವಾರ್, ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಬಿ.ಎಂ. ರಘು, ಗಿರಿಧರ್, ಕಿರಣ್ ಜೈರಾಮೇಗೌಡ ಮೊದಲಾದವರು ಇದ್ದರು.