ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ದತ್ತು ಪಡೆದ ದಂಪತಿಗಳು ಮಗುವಿಗೆ ಒಳ್ಳೆ ಸಂಸ್ಕಾರ, ಸಂಸ್ಕೃತಿಯೊಂದಿಗೆ ಉತ್ತಮ ಶಿಕ್ಷಣ ನೀಡಿ ಆದರ್ಶ ವ್ಯಕ್ತಿಯನ್ನಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.ಬೆಟಗೇರಿಯ ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಮಗುವನ್ನು ಕೇರಳದ ಮಕ್ಕಳಿಲ್ಲದ ದಂಪತಿಗೆ ಕಾನೂನಿನಡಿ ಮಗುವನ್ನು ಹಸ್ತಾಂತರಿಸಿ, ಮಾತನಾಡಿದರು.
ಬೇರೆ ರೀತಿಯ ಸಂಬಂಧಗಳಿಂದಾಗಿ ಜನಿಸುವ, ಹೆತ್ತವರಿಗೆ ಬೇಡವಾಗುವ ಮಕ್ಕಳ ಸಂಖ್ಯೆ ಇಳಿಮುಖವಾಗಿ ಶೂನ್ಯವಾಗಲಿ. ಆದರ್ಶ ಸಮಾಜದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಪಡೆದ ದಂಪತಿಗಳಿಂದ ಆದರ್ಶ ಮಕ್ಕಳು ಕುಟುಂಬ, ಸಮಾಜವನ್ನು ಬೆಳಗುವಂತಾಗಲಿ ಎಂದರು.ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಇದು ಮನ ಕಲಕುವ, ಮನ, ಮಾನವೀಯತೆ ಕಟ್ಟುವ ಸನ್ನಿವೇಶ. ಎಲ್ಲೋ ಜನ್ಮ ತಾಳಿದ ಮಗು ಎಲ್ಲೋ ಜೀವನ ರೂಪಿಸಿಕೊಳ್ಳುವಂತದ್ದು. ತಂದೆ-ತಾಯಿಗೆ ಹಾತೊರೆಯುವ ಮಗು ಒಂದೆಡೆಯಾದರೆ ಮಕ್ಕಳಿಲ್ಲದ ಚಿಂತೆಯಲ್ಲಿ ಕೊರಗುವ ದಂಪತಿ ಇನ್ನೊಂದೆಡೆ. ಮೂರು ಜೀವಾತ್ಮಗಳನ್ನು ಒಂದೆಡೆ ಬೇಸುಗೆಗೊಳಿಸುವ ಈ ಕಾರ್ಯ ನಿಜಕ್ಕೂ ಮಾನಸಿಕ ನೆಮ್ಮದಿ ನೀಡುವಂತದ್ದು, ಪುಣ್ಯಪ್ರಾಪ್ತಿಯಾಗುವಂತದ್ದು ಎಂದರು.
ಮಗುವನ್ನು ದತ್ತು ಪಡೆದ ದಂಪತಿಗಳು ಮಗುವಿಗೆ ಸದೃಢ ಆರೋಗ್ಯ, ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಕ್ಷಣ ನೀಡಲಿ. ತಮ್ಮ ರಕ್ತ ಹಂಚಿಕೊಂಡು ಬೆಳೆದ ಮಗುವೆಂದು ಭಾವಿಸಿ ಪ್ರೀತಿ, ಮಮತೆಯೊಂದಿಗೆ ಸಂಸಾರ ನಂದನವನದಂತೆ ಇರಲಿ ಎಂದು ಶುಭ ಕೋರಿದರು.ಈ ವೇಳೆ ಈಶಣ್ಣ ಮುನವಳ್ಳಿ, ಉಮಾ ಈಶಣ್ಣ ಮುನವಳ್ಳಿ ದಂಪತಿಗಳು ಸಂಸ್ಥೆಯಲ್ಲಿ ಪೋಷಣೆಗೊಂಡ ಮಗುವನ್ನು ಜಿಲ್ಲಾಧಿಕಾರಿಗಳಿಂದ ಪಡೆದು ಮಕ್ಕಳಿಲ್ಲದ ಕೇರಳದ ದಂಪತಿಗೆ ಹಸ್ತಾಂತರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ದತ್ತು ಮಗು ಪಡೆಯುವ ಕ್ರಮಗಳನ್ನು ವಿವರಿಸಿದರು. ಮಂಜುನಾಥ ಚನ್ನಪ್ಪನವರ ಹಾಗೂ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿದರು.ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಮಾಧುಸಾ ಮೇರವಾಡೆ, ಜಯರಾಜ ಮುಳಗುಂದ, ಲುಕ್ಕಣಸಾ ರಾಜೋಳಿ, ಥಾಮಸ್ ಮ್ಯಾಚ್ಯು, ಲಲಿತಾಬಾಯಿ ಮೇರವಾಡೆ, ಉಮಾ ಚನ್ನಪ್ಪನವರ, ಪುಷ್ಪಾವತಿ ಕಾಮರ್ತಿ, ಶ್ರೀಧರ ಕಾಂಬಳೆ, ಪ್ರಮೋದ ಹಿರೇಮಠ ಇದ್ದರು. ಚೇತನ್ ಮೇರವಾಡೆ ಪ್ರಾರ್ಥಿಸಿದರು. ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ನರಸಿಂಹ ಕಾಮರ್ತಿ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.