ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕ ಮತದಾರರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ವಿಧಾನ ಪರಿಷತ್ತಿಗೆ ಕಳುಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.ಶಾಸಕರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಪರ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ತಮ್ಮ ಬೆಂಬಲಿಗರ ಪಡೆಯೊಂದಿಗೆ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಸಂಯುಕ್ತ ಪ್ರಥಮ ದರ್ಜೆ ಕಾಲೇಜುಗಳಿಗೆ ಭೇಟಿ ನೀಡಿ ಕೆ.ವಿವೇಕಾನಂದರ ಪರ ಮತಯಾಚನೆ ಮಾಡಿದರು.
ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ವಿವೇಕಾನಂದರು ಯುವಕರಾಗಿದ್ದು, ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸಿ ತಮ್ಮ ಅಕ್ಷರ ಕಲಿಸಿದ ಗುರುಗಳ ಸೇವೆ ಮಾಡಲು ಆಸಕ್ತಿ ಹೊಂದಿದ್ದಾರೆ. ಅಕ್ಷರ ಕಲಿಸಿದ ಶಿಕ್ಷಕರ ಋಣ ತೀರಿಸುವ ಸಲುವಾಗಿಯೇ ಅವರು ಇಂದು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ ಎಂದರು.ಮೈಸೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿವೇಕಾನಂದ ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳ ಗಮನ ಸೆಳೆದಿದ್ದಾರೆ. ಶಿಕ್ಷಕ ಸಮುದಾಯ ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ವಿವೇಕಾನಂದ ಅವರಿಗೆ ನೀಡಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಕೋರಿದರು.ವಿಧಾನ ಸಭೆಯಲ್ಲಿ ಜವಾಬ್ದಾರಿಯುತ ಶಾಸಕನಾಗಿ ನಾನು ಮತ್ತು ವಿಧಾನ ಪರಿಷತ್ತಿನಲ್ಲಿ ವಿವೇಕಾನಂದರು ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ ಮಾಡುತ್ತೇವೆ. ನಾವಿಬ್ಬರೂ ಜೊತೆಗೂಡಿ ಹೆಜ್ಜೆಹಾಕಿ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ ಎಂದು ಎಚ್.ಟಿ.ಮಂಜು ಭರವಸೆ ನೀಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ರಾಜಕೀಯ ಮನ್ವಂತರ ಆರಂಭವಾಗಿದೆ. ಎರಡೂ ರಾಜಕೀಯ ಪಕ್ಷಗಳ ಮೈತ್ರಿ ದೇಶದ ಗಮನ ಸೆಳೆದಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಸ್ತ ವಿಶ್ವವೇ ಬೆರಗಾಗುವಂತೆ ಭಾರತದ ಶಕ್ತಿಯನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದರು.ಮೈತ್ರಿಯಿಂದ ನರೇಂದ್ರ ಮೋದಿ ಅವರ ಕಾರ್ಯ ಉತ್ಸಾಹ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅನುಭವಗಳು ಒಗ್ಗೂಡಿವೆ. ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೆ.ವಿವೇಕಾನಂದರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಶಿಕ್ಷಕ ಮತದಾರರು ಹೆಚ್ಚಿನ ಮತ ನೀಡಿ ಮೈತ್ರಿ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾಲುದಾರರಾಗಬೇಕು. ತನ್ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರ ಇಳಿವಯಸ್ಸಿನಲ್ಲಿ ಗೆಲುವಿನ ಉಡುಗೊಡೆ ನೀಡಿ ಜೆಡಿಎಸ್ ಪಕ್ಷದ ಕೈ ಬಲಪಡಿಸುವಂತೆ ಶಿಕ್ಷಕ ಮತದಾರರಿಗೆ ಮನವಿ ಮಾಡಿದರು.ಈ ವೇಳೆ ತಾಲೂಕು ಜೆಡಿಎಸ್ ಮುಖಂಡರಾದ ರಾಜೇನಹಳ್ಳಿ ಕುಮಾರಸ್ವಾಮಿ, ರವಿಕುಮಾರ್, ಬಸವಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜು, ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಿ.ಆರ್.ಧನಂಜಯ ಕುಮಾರ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್ ಕುಮಾರ್ ಸೇರಿದಂತೆ ಹಲವರಿದ್ದರು.
;Resize=(128,128))
;Resize=(128,128))
;Resize=(128,128))