ಸಾರಾಂಶ
ಪರಿಸರದ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶೇಖರ ನಾಯಕ
ಕನ್ನಡಪ್ರಭ ವಾರ್ತೆ ಕುಷ್ಟಗಿನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಸ್ತಿ, ಹಣವನ್ನು ಕೊಡುವ ಬದಲು ಸ್ವಚ್ಛ, ಸುಂದರವಾದ ಪರಿಸರ ಸಂಪತ್ತನ್ನು ಕೊಡುಗೆಯಾಗಿ ನೀಡಬೇಕಾಗಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಷ್ಟಗಿ ಕಚೇರಿಯ ಯೋಜನಾಧಿಕಾರಿ ಶೇಖರ ನಾಯಕ ಹೇಳಿದರು.
ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಡೆದ ಪರಿಸರದ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಳೆದ ಎರಡು ವರ್ಷಗಳ ಹಿಂದಿನ ಕೋವಿಡ್ ದಿನಗಳನ್ನು ನೆನಪಿಸಿಕೊಳ್ಳಬೇಕು. ಆ ಸಮಯದಲ್ಲಿ ನಾವುಗಳು ಆಕ್ಸಿಜನ್‌ಗಾಗಿ ಅಲೆದಾಡಬೇಕಾಯಿತು. ಅದೆ ನಾವು ಗಿಡಗಳನ್ನು ಬೆಳೆಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಪರಿಸರವನ್ನು ಬೆಳೆಸಿದಾಗ ಮಾತ್ರ ನಮ್ಮ ಆರೋಗ್ಯ ಸುಧಾರಣೆಯಾಗುತ್ತದೆ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.ಶಿಕ್ಷಕಿ ಪ್ರಭಾವತಿ ಮಾಳಗಿ ಮಾತನಾಡಿ, ಈ ವರ್ಷ ಬೇಸಿಗೆಯಲ್ಲಿ ಶೇ. 40ರಷ್ಟು ಬಿಸಿಲಿನ ವಾತಾವರಣವನ್ನು ನಾವು ಕಂಡಿದ್ದು, ಇದರ ನಿಯಂತ್ರಣಕ್ಕಾಗಿ ನಾವು ಸಸಿಗಳನ್ನು ಬೆಳೆಸುವ ಮೂಲಕ ಪೋಷಣೆ ಮಾಡಬೇಕು. ಮನೆಯ ಮುಂದೆ ಅಥವಾ ಮನೆಯ ಪಕ್ಕದಲ್ಲಿ ಇರುವಂತಹ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಬೇಕು ಎಂದರು.
ನಮ್ಮ ಹಿರಿಯರು ನೀರನ್ನು ಬಾವಿಯಲ್ಲಿ ಬೋರವೆಲ್ಲಿನಲ್ಲಿ ನೋಡಿದ್ದರು, ಈಗ ನಾವು ಬಾಟಲಿಯಲ್ಲಿ ನೀರು ಕಾಣುತ್ತಿದ್ದೇವೆ, ಕುಡಿಯುತ್ತೇವೆ. ಇದೇ ತರಹ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರು ಕುಡಿಯುವ ಬದಲಿಗೆ ನೀರಿನ ಮಾತ್ರೆ ಸೇವನೆ ಮಾಡುವಂತಹ ಪರಿಸ್ಥಿತಿ ಎದುರಾಗಬಹುದು. ಅಂತಹ ಸ್ಥಿತಿ ಬಾರದಂತೆ ಮಾಡಲು ಎಲ್ಲರೂ ಪರಿಸರ ಸಂರಕ್ಷಣೆಯ ಕೆಲಸ ಮಾಡಬೇಕು ಎಂದರು.ಶಾಲಾ ಸಮಿತಿಯ ಅಧ್ಯಕ್ಷ ಬಸವರಾಜ ಕಡಿವಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಗ್ರಾಪಂ ಸದಸ್ಯರಾದ ಶ್ರೀದೇವಿ ಮಳಿಮಠ, ಈರಮ್ಮ ಟೆಂಗುಂಟಿ, ಒಕ್ಕೂಟದ ಮುಖ್ಯಸ್ಥರಾದ ಗಂಗಮ್ಮ ಇಳಗೇರ, ಮುಖ್ಯ ಶಿಕ್ಷಕ ಅಮರಗುಂಡಯ್ಯ ಹಿರೇಮಠ, ಕೃಷಿ ಅಧಿಕಾರಿಗಳು ರವಿಚಂದ್ರ, ದೋಟಿಹಾಳ ವಲಯದ ಸೂಪರ್‌ವೈಸರ್ ಶರಣಪ್ಪ ಶೆಟ್ಟೆಪ್ಪನವರು, ಸೇವಾ ಪ್ರತಿನಿಧಿ ಗ್ಯಾನೇಶ ಮನ್ನಾಪೂರ ಇದ್ದರು. ಶಿಕ್ಷಕ ಶರಣಪ್ಪ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು ಬಳಿಕ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.