ಸಮುದ್ರ ಸೇರುವ ನೀರನ್ನು ರೈತರ ಕೃಷಿ ಭೂಮಿಗೆ ನೀಡಿ: ಮರಿಗೌಡ ಪಾಟೀಲ

| Published : Mar 07 2025, 12:46 AM IST

ಸಮುದ್ರ ಸೇರುವ ನೀರನ್ನು ರೈತರ ಕೃಷಿ ಭೂಮಿಗೆ ನೀಡಿ: ಮರಿಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನದಿ ಜೋಡಣೆಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ಅನ್ನದಾತರು ನೀರಿಗಾಗಿ ಗೋಳಿಡುವಂತಾಗಿದೆ.

ಹಾನಗಲ್ಲ: ಸಮುದ್ರ ಸೇರಿ ಉಪ್ಪಾಗುವ ನೀರನ್ನು ರೈತರ ಕೃಷಿ ಭೂಮಿಗೆ ನೀಡಿ, ಜನರ ಬಾಯಾರಿಕೆ ಆರಿಸಲು ಅನುವು ಮಾಡಿ ಕೊಡಿ, ವರದಾ-ಬೇಡ್ತಿ ನದಿಗಳ ಜೋಡಣೆ ಜನಪ್ರತಿನಿಧಿಗಳ ಬದ್ಧತೆಯನ್ನವಲಂಬಿಸಿದೆ. ಇದೇ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಶಾಸಕ ಶ್ರೀನಿವಾಸ ಮಾನೆ ಅವರ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ನದಿ ಜೋಡಣೆಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ಅನ್ನದಾತರು ನೀರಿಗಾಗಿ ಗೋಳಿಡುವಂತಾಗಿದೆ. ಸರ್ಕಾರ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಅವಕಾಶವಿದ್ದಾಗ್ಯೂ ನಿರ್ಲಕ್ಷ್ಯ ಹಾಗೂ ವಿಳಂಬಕ್ಕೆ ಅವಕಾಶ ಮಾಡಿಕೊಡುತ್ತಿರುವುದು ರೈತರ ನೋವಾಗಿದೆ. ರೈತರು ಕೃಷಿಯಿಂದ ವಿಮುಖರಾಗುವ ಮುನ್ನ ಜಲಮೂಲಗಳನ್ನು ಬಳಸಿಕೊಂಡು ನೀರಾವರಿಗೆ ಮೊದಲ ಆದ್ಯತೆಯಲ್ಲಿ ಅನುದಾನ ನೀಡಬೇಕು. ಜಿಲ್ಲೆಯ ಎಲ್ಲ ಶಾಸಕರೂ ಇದರಲ್ಲಿ ತಮ್ಮ ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಕೀಲ ಎಸ್.ಎಂ. ಕೋತಂಬರಿ, ರೈತ ಸಂಘದ ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ ಮಾತನಾಡಿದರು. ಶ್ರೀಧರ ಮಲಗುಂದ, ಮಹಲಿಂಗಪ್ಪ ಅಕ್ಕಿವಳ್ಳಿ, ಸೋಮಣ್ಣ ಜಡೆಗೊಂಡರ, ವಾಸುದೇವ ಕಮಾಟಿ, ಷಣ್ಮುಖ ಅಂದಲಗಿ, ಶಂಕರಗೌಡ ಪಾಟೀಲ, ಪರಸಪ್ಪ ಮಡಿವಾಳರ, ಮಂಜು ತಲಗಡ್ಡಿ, ಅನಿಲ ಚಿಕ್ಕಾಂಶಿ, ಚನ್ನಬಸವ ಯತ್ನಳ್ಳಿ ಇತರರು ಪಾಲ್ಗೊಂಡಿದ್ದರು.

ಬೇಡ್ತಿ- ವರದಾ ನದಿ ಜೋಡಣೆಗೆ ಆಗ್ರಹ

ರಾಣಿಬೆನ್ನೂರು: ಬೇಡ್ತಿ- ವರದಾ ನದಿ ಜೋಡಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಗುರುವಾರ ಶಾಸಕ ಪ್ರಕಾಶ ಕೋಳಿವಾಡ ಅವರ ಮನೆಗೆ ಮುತ್ತಿಗೆ ಹಾಕಿ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಹಳ್ಳಳ್ಳಿ ಅವರಿಗೆ ಮನವಿ ಸಲ್ಲಿಸಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಶ ಹೊನ್ನಪ್ಪಳವರ ಮಾತನಾಡಿ, ಸಮುದ್ರ ಸೇರಿ ಉಪ್ಪಾಗುವ ಬೇಡ್ತಿ ನದಿ ನೀರನ್ನು ವರದಾ ನದಿಗೆ ಜೋಡಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಯೋಜನೆ ಜಾರಿಗೆ ಎರಡು ದಶಕಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಅನ್ನದಾತ ಗೋಳು ಹೇಳಿಕೊಳ್ಳುವ ಮೊದಲೇ ಸರ್ಕಾರಗಳು ಸಕಾರಾತ್ಮಕ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇನ್ನು ಮೇಲಾದರೂ ಸರ್ಕಾರ ಬೇಡ್ತಿ- ವರದಾ ನದಿ ಜೋಡಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಕಾರ್ಯದರ್ಶಿ ಮಲ್ಲಪ್ಪ ಗೌಡರ, ಲೋಕೇಶ ಸುತಾರ, ಕರಬಸಪ್ಪ ಅಗಸಿಬಾಗಿಲ, ಹುಚ್ಚಪ್ಪ ಮೆಡ್ಲೇರಿ, ಸುರೇಶ ಧುಳೆಹೊಳಿ, ರಮೇಶ ಗೌಡರ, ಸಿದ್ದಪ್ಪ ಮೆಣಸಿನಹಾಳ, ಹುಚ್ಚಪ್ಪ ದೇವರಗುಡ್ಡ, ಫಕ್ಕಿರಪ್ಪ ಗೌಡರ ಮತ್ತಿತರರಿದ್ದರು.