ಗುಜ್ಜಲ್‌ ನಾಗರಾಜ್‌ಗೆ ಬಳ್ಳಾರಿ ಕೈ ಟಿಕೆಟ್‌ ನೀಡಿ

| Published : Mar 23 2024, 01:04 AM IST

ಗುಜ್ಜಲ್‌ ನಾಗರಾಜ್‌ಗೆ ಬಳ್ಳಾರಿ ಕೈ ಟಿಕೆಟ್‌ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮುಖಂಡ ಗುಜ್ಜಲ್ ನಾಗರಾಜ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಬೆಂಬಲಿಗರು ಸಂಚಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಹೊಸಪೇಟೆ:

ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಮುಖಂಡ ಗುಜ್ಜಲ್ ನಾಗರಾಜ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಬೆಂಬಲಿಗರು ಸಂಚಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಗುಜ್ಜಲ್ ನಾಗರಾಜ ಪಕ್ಷಕ್ಕೆ ನಿಷ್ಠಾವಂತರಾಗಿ 30 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಸಂಘಟಿಸಿದ್ದಾರೆ. ಸಮಾಜ ಸೇವೆ ಮೂಲಕ ಅನೇಕ ಸಮಾಜಮುಖಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿ ಟಿಕೆಟ್‌ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖಂಡ ರಾಘವೇಂದ್ರ ಮಾತನಾಡಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ವಿಭಜನೆ ಆಗಿರುವುದರಿಂದ ಪಶ್ಚಿಮ ತಾಲೂಕುಗಳ ಅಭಿವೃದ್ಧಿಗಾಗಿ ಮತ್ತು ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಈ ಬಾರಿ ಗುಜ್ಜಲ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.ಯುವ ಮುಖಂಡ ಭರತ್ ಕುಮಾರ್‌ ಸಿ.ಆರ್. ಮಾತನಾಡಿ, ಈಗಾಗಲೇ ಶಾಸಕರಾಗಿ ಅಧಿಕಾರವನ್ನು ಅನುಭವಿಸುತ್ತಿರುವವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿರುವುದು ಶೋಚನಿಯ ಸಂಗತಿ. ಗೆದ್ದರೆ ಸಂಸದರು, ಇಲ್ಲವಾದರೆ ಸಚಿವರು. ಎರಡೆರಡು ಅವಕಾಶಗಳನ್ನು ಪಕ್ಷ ಒದಗಿಸಿಕೊಟ್ಟರೆ ಉಳಿದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ದೊರೆಯುವುದು ಯಾವಾಗ? ಕಾರ್ಯಕರ್ತರ ಕೂಗು, ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಗುಜ್ಜಲ ನಾಗರಾಜ ಅವರಿಗೆ ಟಿಕೆಟ್ ನೀಡಬೇಕು ಎಂಬುದಾಗಿದೆ. ಪಕ್ಷದ ವರಿಷ್ಠರಲ್ಲಿ ಕಾರ್ಯಕರ್ತರ ಕೂಗು ಘಂಟಾಘೋಷವಾಗಿದೆ. ಇಲ್ಲವಾದರೆ ಕಾಂಗ್ರೆಸ್‌ಗೆ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮುಖಂಡರಾದ ತಾರಿಹಳ್ಳಿ ಹನುಮಂತಪ್ಪ, ಯೋಗಲಕ್ಷ್ಮಿ, ಪಿ. ಬಾಬು, ಬಿ. ಮಾರೆಣ್ಣ, ಜಾಫರ್, ಶ್ರೀನಿವಾಸ್‌, ವಿ. ಸೋಮಪ್ಪ, ಲಿಂಗಣ್ಣನಾಯಕ, ನಾಗರಾಜ, ಮಂಜುಳಾ, ಕವಿತಾ ನಾಯಕ, ರಾಧಾ ನಾಯ್ಡು, ಪ್ರಶಾಂತ್ ನಾಯ್ಕ, ವಾಲ್ಮೀಕಿ, ಜನಾರ್ದನ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನುಸಂಚಾರ ತಡೆ ನಡೆಸಬಾರದು ಎಂದು ತಿಳಿ ಹೇಳಿದರು. ಈ ವೇಳೆ ಕೆಲ ಕಾಲ ಮಾತಿನಚಕಮಕಿಯೂ ನಡೆಯಿತು. ಬಳಿಕ ಪ್ರತಿಭಟನಾಕಾರರ ಮನವೊಲಿಸಿದ ಮುಖಂಡರು, ಪರಿಸ್ಥಿತಿ ತಿಳಿಗೊಳಿಸಿದರು.