ರೈತರ ಸಮಸ್ಯೆ ಕುರಿತು ಸಿಎಂ ಜೊತೆಗೆ ಚರ್ಚಿಸಲು ಸಮಯಾವಕಾಶ ಕೊಡಿ

| Published : Feb 22 2024, 01:51 AM IST

ರೈತರ ಸಮಸ್ಯೆ ಕುರಿತು ಸಿಎಂ ಜೊತೆಗೆ ಚರ್ಚಿಸಲು ಸಮಯಾವಕಾಶ ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆ ನಡೆಯಿತು.

ಧಾರವಾಡ: ಬೆಳೆವಿಮೆ ಪರಿಹಾರ, ಬೆಳೆ ಪರಿಹಾರ, ಮಹದಾಯಿ ಯೋಜನೆ ಅನುಷ್ಠಾನ ಕುರಿತು ಮಹದಾಯಿ ಹೋರಾಟಗಾರರ ಹಾಗೂ ಜಿಲ್ಲೆಯ ರೈತ ಮುಖಂಡರ ಸಭೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು.

ಮಹಾದಾಯಿ ನೀರಾವರಿ ಯೋಜನೆ ಅನುಷ್ಠಾನ, ಹೆಸ್ಕಾಂದಿಂದ ನಿರಂತರ ವಿದ್ಯುತ್ ಪೂರೈಕೆ, ಕುಂದಗೋಳ ಭಾಗದ ರೈತರ ಜಮೀನುಗಳಲ್ಲಿ ಚಿಗರಿಗಳ ಹಾವಳಿ, ಬೆಳೆವಿಮೆ ಪರಿಹಾರ, ಮಧ್ಯಂತರ ಬೆಳೆವಿಮೆ ಪರಿಹಾರ, ಅತಿವೃಷ್ಟಿಯಲ್ಲಿನ ಮನೆಹಾನಿ ಪರಿಹಾರ ಬಿಡುಗಡೆಯಲ್ಲಿ ವಿಳಂಬ, ಬ್ಯಾಂಕ್‌ಗಳಿಂದ ಓಟಿಎಸ್ ತೊಂದರೆ, ಅಣ್ಣಿಗೇರಿಯ ಗ್ರಾಮ ಚಾವಡಿ, ಜಿಲ್ಲೆಯ ಕೆರೆಗಳಿಗೆ ಕಾಳಿನದಿ ನೀರು ಪೂರೈಕೆ, ಪಹಣಿ ಪತ್ರಿಕೆಯಲ್ಲಿನ ವಿಷಯಗಳ ಅಪ್‌ಡೇಟ್, ನಮ್ಮ ಹೊಲ-ನಮ್ಮ ದಾರಿ ಯೋಜನೆ ಜಾರಿ ಮತ್ತು ಮಹದಾಯಿ ಹಾಗೂ ಉತ್ತರ ಕರ್ನಾಟಕದ ಕೃಷಿ, ನೀರಾವರಿ, ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ರೈತ ಮುಖಂಡರಿಗೆ ಸಮಯಾವಕಾಶ ನೀಡಲು ರೈತ ಮುಖಂಡರು ಮನವಿ ಮಾಡಿದರು.

ರೈತರ ಆತ್ಮಹತ್ಯೆ, ದನಗಳಿಗೆ ಮೇವು ಪೂರೈಕೆ, ಕುಡಿಯುವ ನೀರು, ಕೂಲಿ ಉದ್ಯೋಗ ನೀಡುವ ಬಗ್ಗೆ ಕಾಳಜಿ ವಹಿಸುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ರೈತರು ವಿನಂತಿಸಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮಹದಾಯಿ ಯೋಜನೆ ಜಾರಿಗೆ ಒಬ್ಬ ರೈತನಾಗಿ, ಹೋರಾಟಗಾರನಾಗಿ ಬದ್ಧನಾಗಿದ್ದೇನೆ. ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಕೇಂದ್ರ ಸಚಿವರೊಂದಿಗೆ ರೈತರ ಸಭೆ ಜರುಗಿಸಿ, ಕೇಂದ್ರದ ಸಹಕಾರದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸೋಣ. ಜಿಲ್ಲೆಯ ರೈತರಿಗೆ ಮಧ್ಯಂತರ ಬೆಳೆ ಪರಿಹಾರವಾಗಿ ಈಗಾಗಲೇ ₹70 ಕೋಟಿ ಬಿಡುಗಡೆ ಆಗಿದೆ. ಶೀಘ್ರದಲ್ಲಿ ಪೂರ್ಣ ಪ್ರಮಾಣದ ಬೆಳೆವಿಮೆ ಬಿಡುಗಡೆ ಆಗಲಿದೆ. ರಾಜ್ಯ ಸರ್ಕಾರ ಆರಂಭಿಕವಾಗಿ ₹2 ಸಾವಿರ ಬೆಳೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ. ಕೇಂದ್ರದಿಂದ ಸುಮಾರು ₹17 ಸಾವಿರ ಕೋಟಿ ಪರಿಹಾರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದಕ್ಕೆ ರಾಜ್ಯದ ಪಾಲು ಸೇರಿಸಿ, ರೈತರಿಗೆ ಪರಿಹಾರ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

ರೈತ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಕ್ರಮವಹಿಸಿ, ಈಗಾಗಲೇ 50ಕ್ಕೂ ಹೆಚ್ಚು ವಿವಿಧ ರೈತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ, ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಹದಾಯಿ ಹಾಗೂ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ರೈತರ ಸಭೆ ನಡೆಸಲು ಚುನಾವಣಾ ಪೂರ್ವದಲ್ಲಿ ಅಥವಾ ಚುನಾವಣೆ ನಂತರ ಸಮಯ ನಿಗದಿಪಡಿಸಲು ಪ್ರಯತ್ನಿಸುತ್ತೇನೆ ಮತ್ತು ಮುಖ್ಯಮಂತ್ರಿಗಳ ಸಮಯಾವಕಾಶ ನೋಡಿಕೊಂಡು ಫೆ. 24ರಂದು ನವಲಗುಂದ ಕಾರ್ಯಕ್ರಮದಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಕಾರ್ಯಕ್ರಮದಲ್ಲಿ ಸ್ಥಳ ಗುರುತಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಶಾಸಕರು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಧಾರವಾಡ ಮಾದರಿ ಜಿಲ್ಲೆಯಾಗಬೇಕು. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರ ಬೇಕು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು, ಜನ ಜಾನುವಾರು ಮೇವು, ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಗೋಶಾಲೆ ಪ್ರಾರಂಭವಾಗಿದೆ. ಜಿಲ್ಲೆಯ 14 ಸ್ಥಳಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ರೈತರಿಗೆ ಬ್ಯಾಂಕ್‌ಗಳಲ್ಲಿ ಆಗುತ್ತಿರುವ ಓಟಿಎಸ್ ಸಮಸ್ಯೆ ಪರಿಹರಿಸಲು ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗುವುದು. ರೈತರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದರೆ, ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ್ ಬ್ಯಾಕೋಡ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಟಕಾ, ಜೂಜು ಮತ್ತು ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ಎಲ್ಲ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಿ, ಚುರುಕುಗೊಳಿಸಲಾಗಿದೆ. ಯಾವುದೇ ಗ್ರಾಮಗಳಲ್ಲಿ ಅಪರಾಧ ಕೃತ್ಯಗಳು, ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ತೋಟಗಾರಿಕಾ ಇಲಾಖೆಯ ಕೆ.ಸಿ. ಬದ್ರಣ್ಣನವರ, ಕೃಷಿ ಇಲಾಖೆ ಜಯಶ್ರೀ ಹಿರೇಮಠ, ಎಸ್‌ಬಿಐ ವಿಮಾ ಕಂಪನಿಯ ಉಮೇಶ ಕಾಂತಾ, ರೈತ ಮುಖಂಡರಾದ ಶಂಕರ ಅಂಬಲಿ, ಲೋಕನಾಥ ಹೆಬಸೂರ, ಶಿವಣ್ಣ ಹೆಬ್ಬಳ್ಳಿ, ವೀರೇಶ ಸೊಬರದಮಠ, ಭಗವಂತಪ್ಪ ಪಟ್ಟಣದ, ದಿವಟೆ ಗೋಪಾಲ, ರಮೇಶ ಕೊರವಿ, ಬಸವರಾಜ ಜೋಗಪ್ಪನವರ, ಹಣಮಂತ ಬೂದಿಹಾಳ, ರಘುನಾಥ ನಡುವಿನಮನಿ, ಮಹೇಶ್ ಕುಲಕರ್ಣಿ, ಎ.ಪಿ.ಗುರಿಕಾರ, ಸುಭಾಷಚಂದ್ರಗೌಡ ಪಾಟೀಲ ಮತ್ತಿತರರು ಇದ್ದರು.