ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಿಕಾರ್ಡ್ ಬ್ಯಾಂಕ್‌ಗಳು ಹಾಗೂ ರಾಜ್ಯ ಮಟ್ಟದ ಕಾಸ್ಕಾರ್ಡ್ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ದೀರ್ಘಾವಧಿ ಸಾಲದ ಅರ್ಧವಾರ್ಷಿಕ ಕಂತು ಪಾವತಿಗೆ ಈ ಹಿಂದಿನ ಕ್ರಮದಂತೆ ಎರಡು ತಿಂಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡುವಂತೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.ಪಿಕಾರ್ಡ್ ಬ್ಯಾಂಕ್ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಗಳು ತಾಲೂಕು ಮಟ್ಟದ ಸಹಕಾರ ಸಂಘಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಆಯಾಯ ತಾಲೂಕಿನ ರೈತ ಸದಸ್ಯರಿಗೆ ದೀರ್ಘಾವಧಿ, ಮಧ್ಯಮಾವಧಿ ಹಾಗೂ ಅಲ್ಪಾವಧಿ ಸಾಲಗಳನ್ನು ಸ್ವಾತಂತ್ರ್ಯ ಪೂರ್ವದಿಂದಲೂ ನೀಡುತ್ತಾ ಬಂದಿವೆ. ಅದೇ ರೀತಿ ಈ ಸಾಲಗಳನ್ನು ಕಾಲಮಿತಿಯೊಳಗೆ ವಸೂಲಿ ಮಾಡುತ್ತಾ ಬಂದಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ಪ್ರಸ್ತುತ ದೀರ್ಘಾವಧಿ ಸಾಲಗಳನ್ನು ನೀಡುವ ಬ್ಯಾಂಕ್‌ಗಳು ಅರ್ಧ ವಾರ್ಷಿಕ ಸಾಲದ ಕಂತುಗಳನ್ನು ವಸೂಲು ಮಾಡುತ್ತಿದ್ದು ಅದರಂತೆ ಸೆಪ್ಟೆಂಬರ್ ಹಾಗೂ ಮಾರ್ಚ್ ತಿಂಗಳಲ್ಲಿ ಸಾಲ ವಸೂಲಿ ಮಾಡುತ್ತಾ ಬಂದಿವೆ. ಮಾರ್ಚ್ ಅಂತ್ಯಕ್ಕೆ ಸಾಲ ಪಾವತಿಸಲಾಗದವರು ಸಾಲವನ್ನು ಮರುಪಾವತಿ ಮಾಡಿ ಶೇ.೩ರ ಬಡ್ಡಿ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿದ್ದಾರೆ.ಈ ಬಾರಿ ಬ್ಯಾಂಕ್‌ನವರು ಮಾರ್ಚ್ ಅಂತ್ಯಕ್ಕೆ ಪೂರ್ಣ ಸಾಲವನ್ನು ಕಡ್ಡಾಯವಾಗಿ ಮರು ಪಾವತಿಸುವಂತೆ ಬ್ಯಾಂಕ್‌ನ ಪ್ರಕಟಣಾ ಫಲಕದಲ್ಲಿ ನೋಟಿಸ್‌ಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಸಾಲಗಾರ ಸದಸ್ಯರಿಗೆ ಅಂಚೆಯ ಮೂಲಕ ನೋಟಿಸ್‌ಗಳನ್ನು ನೀಡಿರುವುದಲ್ಲದೇ, ಸಾಲಗಾರರ ಮನೆಗಳಿಗೆ ತೆರಳಿ ನೋಟಿಸ್ ಜಾರಿಗೊಳಿಸಿರುವುದು ಬ್ಯಾಂಕ್‌ನ ಸಾಲವಸೂಲಾತಿ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ ಎಂದಿದ್ದಾರೆ.
ರೈತರು ಈ ಬಾರಿ ಸಾಲವನ್ನು ಪಾವತಿಸಲು ಹಣವನ್ನು ಹೊಂದಾಣಿಕೆ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ರೈತರು ಬೆಳೆದ ಕಬ್ಬನ್ನು ಮಾರಾಟ ಮಾಡಿದರೂ ನಿಯಮದ ರೀತ್ಯಾ ೧೪ ದಿನಗಳಲ್ಲಿ ಹಣವನ್ನು ಪಾವತಿ ಮಾಡದೇ ತಿಂಗಳುಗಟ್ಟಲೇ ವಿಳಂಬ ಮಾಡಿದ್ದಾರೆ. ಆದ್ದರಿಂದ ಏಕಾಏಕಿ ಪಿಕಾರ್ಡ್ ಬ್ಯಾಂಕ್‌ನವರು ರೈತರು ಪಡೆದ ಸಾಲವನ್ನು ಮಾರ್ಚ್ ಅಂತ್ಯದ ವೇಳೆಗೆ ಕಡ್ಡಾಯವಾಗಿ ಪಾವತಿಸುವಂತೆ ನೋಟಿಸ್ ನೀಡುತ್ತಿರುವುರಿಂದ ರೈತ ಸದಸ್ಯರಿಳಿಗೆ ತೊಂದರೆಯುಂಟಾಗುತ್ತಿದೆ. ಕಾಲಮಿತಿಯೊಳಗೆ ಸಾಲವನ್ನು ಪಾವತಿಸದಿದ್ದಲ್ಲಿ ಸುಸ್ತಿದಾರರಾಗುವ ಸಾಧ್ಯತೆ ಇರುತ್ತದೆ. ಹೀಗಾದಲ್ಲಿ ಮುಂದೆ ರೈತರಿಗೆ ಸರ್ಕಾರದಿಂದ ಲಭಿಸುವ ಸಾಲ ಸೌಲಭ್ಯಗಳು ಹಾಗೂ ಇತರೆ ಆರ್ಥಿಕ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಬ್ಯಾಂಕ್‌ಗಳು ಹಾಗೂ ರೈತ ಸದಸ್ಯರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಿಕಾರ್ಡ್ ಬ್ಯಾಂಕ್‌ಗಳು ಹಾಗೂ ರಾಜ್ಯ ಮಟ್ಟದ ಕಾಸ್ಕಾರ್ಡ್ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡಲು ರೈತ ಸದಸ್ಯರಿಗೆ ಮಾರ್ಚ್ ಮಾಹೆಯ ನಂತರ ಅಧಿಕವಾಗಿ ಎರಡು ತಿಂಗಳ ಕಾಲಾವಕಾಶ ನೀಡಿ ರೈತ ಸದಸ್ಯರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.