ಸಾರಾಂಶ
ತರೀಕೆರೆ, ಗ್ರಾಮೀಣ ಭಾಗದಲ್ಲೂ ಸ್ವಚ್ಛತೆ ನಿರ್ವಹಣೆ ಸವಾಲಿನ ಕೆಲಸ ಹಾಗಾಗಿ ಜನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ನಂದಿ ಹೊಸಳ್ಳಿಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಶಿಬಿರ
ಕನ್ನಡಪ್ರಭ ವಾರ್ತೆ, ತರೀಕೆರೆಗ್ರಾಮೀಣ ಭಾಗದಲ್ಲೂ ಸ್ವಚ್ಛತೆ ನಿರ್ವಹಣೆ ಸವಾಲಿನ ಕೆಲಸ ಹಾಗಾಗಿ ಜನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನಂದಿ ಹೊಸಳ್ಳಿಯಲ್ಲಿ ನಡೆದ ಗ್ರಾಮೀಣ ಶಿಬಿರದಲ್ಲಿ ಮಾತನಾಡಿದರು. ಗ್ರಾಮಗಳು ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ, ಸ್ವಚ್ಛತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವ ಮನೋಭಾವ ಕಾಣುತ್ತಿದ್ದೇವೆ. ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲ ಕಾರ್ಯ ಗ್ರಾಮ ಪಂಚಾಯಿತಿಗಳೇ ಮಾಡ ಬೇಕು ಎಂಬ ಧೋರಣೆ ಸರಿಯಲ್ಲ. ಕಸ ನಿರ್ವಹಣೆ, ಸ್ವಚ್ಛತೆ ಕಾರ್ಯದಲ್ಲಿ ಗ್ರಾಮ ಆಡಳಿತದ ಜತೆಗೆ ಜನರೂ ಕೈಜೋಡಿಸ ಬೇಕು. ಆಗ ಮಾತ್ರ ಗ್ರಾಮಗಳ ಪ್ರಗತಿ ಸಾಧ್ಯ ಎಂದು ಹೇಳಿದರು.ಭಾರತದಲ್ಲಿ ಮೇಘಾಲಯ ಸ್ವಚ್ಛತೆ ನಿರ್ವಹಣೆಯಲ್ಲಿ ಮಾದರಿಯಾಗಿದೆ. ಕರ್ನಾಟಕದಲ್ಲೂ ಗ್ರಾಮ ಸ್ವಚ್ಛತೆ ಅರಿವು ಮೂಡುತ್ತಿದೆ. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ತಮ್ಮ ಭಾಗದ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ತರೀಕೆರೆ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಸಂಚಾಲಕ ಪಿ.ವಿ. ಓಂಕಾರಮೂರ್ತಿ ಮಾತನಾಡಿ, ಅಫೀಮು, ಗುಟ್ಕಾ, ಬೀಡಿ, ಸಿಗರೇಟು ಸೇರಿದಂತೆ ಮಾದಕ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ಚಲನಚಿತ್ರ ನಿರ್ದೇಶಕ ಧನುಷ್ ಗಾರ್ಗಿ ಮಾತನಾಡಿ, ಉತ್ತಮ ಆರೋಗ್ಯದ ಜತೆಗೆ ಉತ್ತಮ ಆಲೋಚನೆಗಳೂ ಸಮಾಜ ಸ್ವಾಸ್ತ್ಥ್ಯಹೆಚ್ಚಿಸುತ್ತವೆ ಎಂದು ಹೇಳಿದರು. ಗ್ರಾ.ಪಂ ಸದಸ್ಯ ಚಂದ್ರಪ್ಪ, ಕಸಾಪ ಅಧ್ಯಕ್ಷ ತಮ್ಮಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರ ಮೂರ್ತಿ, ಶಿಕ್ಷಕ ಮಲ್ಲೇಶ್, ಆಶಾ ಕಾರ್ಯಕರ್ತೆ ನಾಗಮ್ಮ, ಗ್ರಾಮಸ್ಥರಾದ ಲೋಕೇಶ್ ಭಕ್ತನಕಟ್ಟೆ, ಸತೀಶ್ ಕಾಟಿಗನರೆ ಉಪಸ್ಥಿತರಿದ್ದರು.11ಕೆಟಿಆರ್.ಕೆ.1ಃ
ತರೀಕೆರೆಯ ನಂದಿಹೊಸಳ್ಳಿಯಲ್ಲಿ ನಡೆದ ಗ್ರಾಮೀಣ ಶಿಬಿರದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಚಲನಚಿತ್ರ ನಿರ್ದೇಶಕ ಧನುಷ್ ಗಾರ್ಗಿ, ಪಿ.ವಿ. ಓಂಕಾರಮೂರ್ತಿ ಭಾಗವಹಿಸಿದ್ದರು.