ಕುಷ್ಟಗಿ: ಇಂದಿನ ಯುವಪೀಳಿಗೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಹೇಶ್ ಜಿ. ಹಡಪದ ಹೇಳಿದರು.
ಪಟ್ಟಣದ ಆರಾಳಗೌಡ್ರು ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಹಣ, ಆಸ್ತಿ, ಅಧಿಕಾರ ಮತ್ತು ಯಶಸ್ಸಿಗಿಂತ ಆರೋಗ್ಯವೇ ಅಮೂಲ್ಯವಾದ ಸಂಪತ್ತು. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಜೀವನಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಸ್ವಚ್ಛತೆ ಆರೋಗ್ಯದ ಮೊದಲ ಮೆಟ್ಟಿಲಾಗಿದ್ದು, ಕೈಗಳನ್ನು ಶುಚಿಯಾಗಿ ತೊಳೆಯುವುದು, ಶುದ್ಧ ನೀರು ಕುಡಿಯುವುದು ಹಾಗೂ ಸ್ವಚ್ಛ ಆಹಾರ ಸೇವಿಸುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಹಣ್ಣು, ತರಕಾರಿಗಳು ಹಾಗೂ ಪೌಷ್ಟಿಕ ಆಹಾರವನ್ನು ಹೆಚ್ಚು ಸೇವಿಸಬೇಕು. ಜಂಕ್ ಫುಡ್, ಅತಿಯಾದ ಸಿಹಿ ಪದಾರ್ಥಗಳು ಮತ್ತು ಆರೋಗ್ಯಕ್ಕೆ ಹಾನಿಕಾರಕ ಆಹಾರ ಪದ್ಧತಿ ತ್ಯಜಿಸಬೇಕು. ನಿಯಮಿತ ವ್ಯಾಯಾಮ, ಕ್ರೀಡೆ, ಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ. ಒತ್ತಡ ನಿಯಂತ್ರಿಸಿ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಯುವಕರನ್ನು ದಾರಿ ತಪ್ಪಿಸುವ ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಆರಾಳಗೌಡರ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವಕರು ಆರೋಗ್ಯ ಕಾಪಾಡಿಕೊಂಡು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಿವಕುಮಾರ್ ಆರಾಳಗೌಡ್ರು, ನೀಲಮ್ಮ ಆರಾಳಗೌಡ್ರು, ಪೂಜಾ ಆರಾಳಗೌಡ್ರು, ನಸಿರಿನ್ ಬೇಗಂ, ಸೇವಾ ಪ್ರತಿನಿಧಿಗಳಾದ ನಾಗರತ್ನಾ, ಮಂಜುಳಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.